ಹೊಸದಿಲ್ಲಿ: ಯುವತಿಯನ್ನು ಅಪಹರಿಸಿ, ಅತ್ಯಾಚಾರಗೈದು ಹತ್ಯೆ; ಸಿಬಿಐ ತನಿಖೆಗೆ ಕುಟುಂಬ ಆಗ್ರಹ

ಹೊಸದಿಲ್ಲಿ,ಸೆ.4: ದಿಲ್ಲಿಯ ನಾಗರಿಕ ರಕ್ಷಣೆ (ಡಿಸಿಸಿ)ಯ ಉದ್ಯೋಗಿ 21ರ ಹರೆಯದ ಯುವತಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಹತ್ಯೆಗೈದ ಘಟನೆ ಹೊಸದಿಲ್ಲಿಯ ಸಂಗಮ್ ವಿಹಾರ್ನಲ್ಲಿ ಆಗಸ್ಟ್ 26ರಂದು ನಡೆದಿದೆ.
‘‘ಸಬಿಯಾ (ಹೆಸರು ಬದಲಾಯಿಸಲಾಗಿದೆ)ಳನ್ನು ಆಗಸ್ಟ್ 26ರಂದು ಸಂಜೆ ಕೆಲಸದ ಸ್ಥಳದಿಂದ ಅಪಹರಿಸಲಾಗಿದೆ. ಅನಂತರ ಫರೀದಾಬಾದ್ ಗೆ ಕರೆದೊಯ್ದು ಅತ್ಯಾಚಾರಗೈದು ಇರಿದು ಹತ್ಯೆ ಮಾಡಲಾಗಿದೆ. ಆಕೆಯ ಮೃತದೇಹದ ಬಾಯಿಯಲ್ಲಿ ಇರಿತದ ಗಾಯ ಕಂಡು ಬಂದಿದೆ. ಮೃತದೇಹವನ್ನು ವಿರೂಪಗೊಳಿಸಲಾಗಿದೆ. ಸ್ತನಗಳನ್ನು ಕತ್ತರಿಸಲಾಗಿದೆ’’ ಎಂದು ಸಬಿಯಾಳ ಕುಟುಂಬ ಆರೋಪಿಸಿದೆ.
ಸಬಿಯಾ ಅವರ ಮೃತದೇಹ ಪತ್ತೆ ಮಾಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ಬಳಿಕ ಅದನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.
ಪರಾರಿಯಾಗಿದ್ದಾರೆ ಎಂದು ಹೇಳಲಾದ ಆಕೆಯ ಇಬ್ಬರು ಸಹೋದ್ಯೋಗಿಗಳು ಈ ಬರ್ಬರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸಬಿಯಾಳ ಕುಟುಂಬ ಆರೋಪಿಸಿದೆ.
ಅವರಿಬ್ಬರ ವಿರುದ್ಧ ದೂರು ದಾಖಲಿಸಲು ನಾವು ಸಂಗಮ್ ವಿಹಾರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆವು ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು ಎಂದು ಕುಟುಂಬ ಆರೋಪಿಸಿದೆ.
ಈ ಪ್ರಕರಣದ ಕುರಿತು ಸಿಬಿಐ ತನಿಖೆ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಆಗ್ರಹಿಸಿ ಸಬಿಯಾ ಕುಟುಂಬ ಕಳೆದ ಒಂದು ವಾರಗಳಿಂದ ತಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದೆ.







