ಮಂಗಳೂರು ಮನಪಾದಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಮಂಗಳೂರು, ಸೆ.4: ಇಲ್ಲಿನ ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ 2021-22ನೇ ಸಾಲಿನಲ್ಲಿ ವ್ಯಕ್ತಿ ಸಂಬಂಧಿ ಸಿದ ಕಾರ್ಯಕ್ರಮಗಳಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ. 24.10 ನಿಧಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮದಡಿ ಪಕ್ಕಾ ಮನೆ ನಿರ್ಮಾಣ, ಮನೆ ದುರಸ್ತಿ, ಶಸ್ತ್ರ ಚಿಕಿತ್ಸೆ ಅಥವಾ ವೈದ್ಯಕೀಯ ವೆಚ್ಚ, ಸಣ್ಣ ಉದ್ದಿಮೆ ಸಹಾಯಧನ, ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ (ಎಸೆಸೆಲ್ಸಿಯಿಂದ ಸ್ನಾತಕೋತ್ತರ ಅಥವಾ ಡಾಕ್ಟರೇಟ್) ನೀಡಲು ಅರ್ಜಿ ಸಲ್ಲಿಸಬಹುದಾಗಿದೆ.
ಶೇ.7.25ರ ಬಡಜನರ ಕಲ್ಯಾಣ ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣ, ನಲ್ಲಿ ನೀರಿನ ಸಂಪರ್ಕ, ಅಡುಗೆ ಅನಿಲ ಸಂಪರ್ಕ, ಶಸ್ತ್ರ ಚಿಕಿತ್ಸೆ ಹಾಗೂ ಪಕ್ಕಾ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಲಾಗುತ್ತದೆ. ಶೇ.5ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಪಕ್ಕಾ ಮನೆ ನಿರ್ಮಾಣ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ದುರಸ್ತಿ, ಅಶಕ್ತರ ದ್ವಿಚಕ್ರ ವಾಹನ, ವೀಲ್ ಚೇರ್, ಕೃತಕ ಕಾಲು, ಶ್ರವಣ ಸಾಧನ ಮತ್ತು ವೈದ್ಯಕೀಯ ವೆಚ್ಚ, ಶಸ್ತ್ರ ಚಿಕಿತ್ಸೆಗೆ ಧನಸಹಾಯ ನೀಡಲಾಗುವುದು. ಅದರೊಂದಿಗೆ ಪೋಷಣಾ ಭತ್ಯೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶವನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆಯ ಉಪ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







