ಪಂಜ್ಶೀರ್ ನಲ್ಲಿ ಮುಂದುವರಿದ ಭೀಕರ ಸಂಘರ್ಷ
ಕಾಬೂಲ್,ಸೆ.5: ತಾಲಿಬಾನ್ ಹಾಗೂ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್) ಪಡೆಗಳನಡುವೆ ಪಂಜಶೀರ್ ಕಣಿವೆಯಲ್ಲಿ ಶನಿವಾರ ಮತ್ತೆ ಭೀಕರ ಕಾಳಗ ನಡೆದಿರುವುದಾಗಿ ವರದಿಯಾಗಿದೆ.
ತಾಲಿಬಾನ್ ಪಡೆಗಳು ಕಪಿಸಾ ಪ್ರಾಂತ ಹಾಗೂ ಪಂಜ್ಶೀರ್ ಪ್ರಾಂತದ ಗಡಿಯಲ್ಲಿರುವ ದರ್ಬಾಂದ್ ಬೆಟ್ಟಶ್ರೇಣಿಗಳನ್ನು ತಲುಪಿವೆಯಾದರೂ , ಅವುಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್)ದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಪಂಜ್ಶೀರ್ನಲ್ಲಿ ಕದನ ಮುಂದುವರಿದಿರುವುದಾಗಿ ತಾಲಿಬಾನ್ ತಿಳಿಸಿದೆ. ಆದರೆ ಅಲ್ಲಿನ ರಾಜಧಾನಿ ಬಾಝರಾಕ್ಗೆ ಸಾಗುವ ರಸ್ತೆಯಲ್ಲಿ ಹಾಗೂ ಪ್ರಾಂತೀಯ ಗವರ್ನರ್ ಅವರ ಕಾರ್ಯಾಲಯದ ಆವರಣದಲ್ಲಿ ನೆಲಬಾಂಬ್ಗಳನ್ನು ಇರಿಸಿರುವುದರಿಂದ ತನ್ನ ಪಡೆಗಳ ಮುನ್ನಡೆಯು ಕುಂಠಿತಗೊಂಡಿರುವುದಾಗಿ ಅದು ಹೇಳಿದೆ.
ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಮುನ್ನ ಪಂಜ್ಶೀರ್ ಪ್ರಾಂತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಭಾರೀ ಪ್ರಯತ್ನ ನಡೆಸುತ್ತಿದೆ.
ನೆಲ ಬಾಂಬ್ ಗಳನ್ನು ತೆಗೆದುಹಾಕುವ ಹಾಗೂ ಆಕ್ರಮಣವನ್ನು ಮುಂದುವರಿಸುವ ಕೆಲಸಗಳು ಏಕಕಾಲದಲ್ಲಿ ನಡೆಯುತ್ತಿರುವುದಾಗಿ ಅದು ಹೇಳಿದೆ.
ಸೋವಿಯತ್ ಒಕ್ಕೂಟದ ಆಕ್ರಮಣವನ್ನು ದಶಕಕ್ಕೂ ಹೆಚ್ಚು ಸಮಯದವರೆಗೆ ಹಾಗೂ 1996ರಿಂದ 2001ರವರೆಗೆ ತಾಲಿಬಾನ್ ನ ಆಳ್ವಿಕೆಯ ಅವಧಿಯಲ್ಲಿ ತನ್ನ ಮೇಲಿನ ಆಕ್ರಮಣವನ್ನು ತಡೆಯುವಲ್ಲಿ ಪಂಜ್ಶೀರ್ ಪಡೆಗಳು ಯಶಸ್ವಿಯಾಗಿದ್ದವು.
ತಾಲಿಬಾನ್ ವಿರೋಧಿ ಪಡೆಗಳಾದ ತಥಾಕಥಿತ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್)ದ ಸೈನಿಕರು ಕಣಿವೆಯಲ್ಲಿ ಅಪಾರಪ್ರಮಾಣ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಟ್ಟಿದ್ದು, ಭಾರೀ ಸವಾಲು ಒಡ್ಡಿದ್ದಾರೆನ್ನಲಾಗಿದೆ. ಕಾಬೂಲ್ ನಿಂದ 80 ಕಿ.ಮೀ. ಉತ್ತರದಲ್ಲಿರುವ ಪಂಜ್ಶೀರ್ ಕಣಿವೆಯುವ ಕಡಿದಾದ ಕಂದಕ ಮಾರ್ಗದ ಮಾತ್ರವೇ ಸಂಪರ್ಕಿಸಬಹುದಾಗಿರುವುದರಿಂದ ಅದು ಅಭೇದ್ಯವಾಗಿಯೇ ಉಳಿದಿದೆಯೆನ್ನಲಾಗಿದೆ.
ಪಂಜ್ಶೀರ್ನಲ್ಲಿ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಹಾಗೂ ತಾಲಿಬಾನ್ವಿರೋಧಿ ಹೋರಾಟಗಾರ ದಿ.ಅಹ್ಮದ್ ಶಾ ಮಸ್ಸೂದ್ ಅವರ ಪುತ್ರ ಅಹ್ಮದ್ ಮಸ್ಸೂದ್ ಸಂಘರ್ಷವನ್ನು ಮುನ್ನಡೆಸುತ್ತಿದ್ದಾರೆ. ತಾಲಿಬಾನ್ನ ಆಕ್ರಮಣದಿಂದಾಗಿ ಎನ್ಆರ್ಎಫ್ ಅತ್ಯಂತ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ಮಸೂದ್ ಒಪ್ಪಿಕೊಂಡಿದ್ದಾರೆ.
‘‘ ಪರಿಸ್ಥಿತಿ ಅತ್ಯಂತ ಕಠಿಣಕರವಾಗಿದೆ. ನಾವು ಆಕ್ರಮಣಕ್ಕೊಳಗಾಗಿದ್ದೇ ಎಂದು ಸಲೇಹ್ ವಿಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದಾರೆ. ಆದಾಗ್ಯೂನಮ್ಮ ಪ್ರತಿರೋಧವು ಮುಂದುವರಿಯಲಿದೆ ’’ ಎಂದವರು ಘೋಷಿಸಿದ್ದಾರೆ.







