ದಾಭೋಲ್ಕರ್ ಹತ್ಯೆ ಪ್ರಕರಣ: ಐವರು ಆರೋಪಿಗಳ ವಿರುದ್ಧ ಯುಎಪಿಎ ಅಡಿ ವಿಚಾರಣೆಗೆ ಸಿಬಿಐ ಮನವಿ

ಹೊಸದಿಲ್ಲಿ,ಸೆ.4: 2013ರಲ್ಲಿ ನಡೆದ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ಐವರು ಆರೋಪಿಗಳು ಒಂದು ವರ್ಗದ ಜನರಲ್ಲಿ ಭೀತಿ ಹುಟ್ಟಿಸಿರುವುದಕ್ಕಾಗಿ ಇವರನ್ನು ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಿಬಿಐ ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
ಪ್ರಕರಣದ ಐವರು ಆರೋಪಿಗಳಾದ ಡಾ. ವಿರೇಂದ್ರ ಸಿನ್ಹಾ ತಾವ್ಡೆ, ಶರದ್ ಕಲಾಸ್ಕರ್, ಸಚಿನ್ ಅಂದುರೆ, ನ್ಯಾಯವಾದಿ ಸಂಜೀವ್ ಪುಣಲೇಕರ್ ಹಾಗೂ ವಿಕ್ರಮ್ ಭಾವೆ ಅವರನ್ನು ಸೆಪ್ಟಂಬರ್ 3ರಂದು ಪುಣೆಯ ಹೆಚ್ಚುವರಿ ಸತ್ರ ನ್ಯಾಯಾಧೀಶ ಎಸ್.ಆರ್. ನವಾಂದಾರ್ ಅವರ ಮುಂದೆ ಹಾಜರು ಪಡಿಸಿದ ವೇಳೆ ಸಿಬಿಐ ಈ ವಾದ ಮಂಡಿಸಿತು.
ಸಿಬಿಐ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಸೂರ್ಯವಂಶಿ ಆರೋಪಿಗಳ ವಿರುದ್ಧ ಯುಎಪಿಎಯ ಸೆಕ್ಷನ್ 16ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಆರೋಪಿಗಳ ವಿರುದ್ಧ ಯುಎಪಿಎಯ ಸೆಕ್ಷನ್ 16 ಅಡಿಯಲ್ಲಿ ಪ್ರಕರಣ ದಾಖಲಿಸಲು ಸಿಬಿಐ ರಾಜ್ಯ ಸರಕಾರದಿಂದ ಅನುಮತಿ ಪಡೆದಿದೆ ಎಂದು ಅವರು ತಿಳಿಸಿದರು.
ಆದರೆ, ಆರೋಪಿಗಳ ಪರ ವಕೀಲ ವಿರೇಂದ್ರ ಇಚಲ್ಕರಂಜಿಕಾರ್ ಅವರು ಆರೋಪಿಗಳ ವಿರುದ್ಧ ಯುಎಪಿಎಯ ಸೆಕ್ಷನ್ 16ರ ಅಡಿಯಲ್ಲಿ ವಿಚಾರನೆ ನಡೆಸಲು ವಿರೋಧ ವ್ಯಕ್ತಪಡಿಸಿದರು.
ವಾದ ಪ್ರತಿವಾದಗಳನನ್ನು ಆಲಿಸಿದ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆಪ್ಟಂಬರ್ 7ಕ್ಕೆ ಮುಂದೂಡಿತು.







