ಇರಾಕ್ ನಲ್ಲಿ ಶಂಕಿತ ಐಸಿಸ್ ಉಗ್ರರ ದಾಳಿ: ಕನಿಷ್ಟ 12 ಪೊಲೀಸರ ಮೃತ್ಯು

photo: twitter@PraesidioLtd
ಬಗ್ದಾದ್, ಸೆ.5: ಇರಾಕ್ ನ ಉತ್ತರದಲ್ಲಿರುವ ಪೊಲೀಸ್ ಚೆಕ್ ಪೋಸ್ಟ್ ನ ಮೇಲೆ ಶಂಕಿತ ಐಸಿಸ್ ಉಗ್ರರು ನಡೆಸಿದ ಅವಳಿ ದಾಳಿಯಲ್ಲಿ ಕನಿಷ್ಟ 12 ಅಧಿಕಾರಿಗಳು ಮೃತಪಟ್ಟಿರುವುದಾಗಿ ‘ಅಲ್ ಜಝೀರಾ’ ವರದಿ ಮಾಡಿದೆ.
ಇರಾಕ್ ನ ಕಿರ್ಕುಕ್ ನಗರದ ದಕ್ಷಿಣದಲ್ಲಿರುವ ಅಲ್ ರಷಾದ್ ವಲಯದಲ್ಲಿ ರವಿವಾರ ಈ ದಾಳಿ ನಡೆದಿದೆ. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದ ಪೊಲೀಸರೊಂದಿಗೆ ತಗಾದೆ ಆರಂಭಿಸಿದ ಶಸ್ತ್ರಸಜ್ಜಿತ ವ್ಯಕ್ತಿಗಳು ಬಳಿಕ ಹಲ್ಲೆ ನಡೆಸಿದ್ದು ಈ ಸಂದರ್ಭ 3 ಪೊಲೀಸರು ಹತರಾಗಿದ್ದಾರೆ. ಘರ್ಷಣೆಯ ಮಾಹಿತಿಯ ಬಳಿಕ ಹೆಚ್ಚುವರಿ ಪಡೆಗಳು ಸ್ಥಳಕ್ಕೆ ಧಾವಿಸಿದಾಗ ರಸ್ತೆಯಲ್ಲಿ ಸ್ಫೋಟಕ ಇರಿಸಿ ವಾಹನವನ್ನು ಉಡಾಯಿಸಲಾಗಿದೆ. ಇದರಲ್ಲಿ ಕನಿಷ್ಟ 6 ಪೊಲೀಸರು ಹತರಾಗಿದ್ದು 3 ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇರಾಕ್ ನ ದಕ್ಷಿಣದ ಮೊಸುಲ್ ನಗರದ ಚೆಕ್ ಪೋಸ್ಟ್ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಕನಿಷ್ಟ 3 ಯೋಧರು ಮೃತರಾಗಿದ್ದು ಒಬ್ಬ ಯೋಧ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 2014ರಲ್ಲಿ ಇರಾಕ್ನ ಕೆಲವು ಪ್ರದೇಶಗಳ ಐಸಿಸ್ ಉಗ್ರರು ಮಿಂಚಿನ ದಾಳಿ ನಡೆಸಿ ಕೈವಶ ಮಾಡಿಕೊಂಡಿದ್ದರು. ಆದರೆ 2017ರಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಕ್ಷಗಳ ಸೇನೆ ಐಸಿಸ್ ಉಗ್ರರನ್ನು ಈ ಪ್ರದೇಶಗಳಿಂದ ಹೊರದಬ್ಬಿತ್ತು.





