ಬ್ರೆಝಿಲ್ ನಲ್ಲಿ ಹಸುಗಳ ಹುಚ್ಚುರೋಗ ದೃಢ: ಚೀನಾಕ್ಕೆ ಗೋಮಾಂಸ ರಫ್ತು ನಿಷೇಧ

ಸಾಂದರ್ಭಿಕ ಚಿತ್ರ
ರಿಯೊಡಿಜನೈರೊ, ಸೆ.5: ದೇಶದಲ್ಲಿ ಹುಚ್ಚು ಹಸು ರೋಗದ ಪ್ರಕರಣ ದೃಢಪಟ್ಟಿರುವುದರಿಂದ ತಕ್ಷಣದಿಂದ ಅನ್ವಯಿಸುವಂತೆ ಚೀನಾಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಬ್ರೆಝಿಲ್ ನ ಕೃಷಿ ಇಲಾಖೆ ಶನಿವಾರ ಹೇಳಿದೆ.
ಮಿನಾಸ್ ಗೆರಾಯ್ಸ ಮತ್ತು ಮಟೊ ಗ್ರೋಸೊ ರಾಜ್ಯಗಳಲ್ಲಿ ಮುದಿ ಜಾನುವಾರುಗಳ ಆರೋಗ್ಯ ತಪಾಸಣೆ ಸಂದರ್ಭ ಬೊವೈನ್ ಸ್ಪಾಂಗಿಫಾರ್ಮ್ ಎನ್ಸೆಫಲೋಪಥಿ(ಬಿಎಸ್ಇ) ರೋಗದ ಪ್ರಕರಣ ದೃಢಪಟ್ಟಿದೆ. ಈ ರೋಗದ ಪ್ರಕರಣ ದೇಶದಲ್ಲಿ ಈ ಹಿಂದೆ ಪತ್ತೆಯಾಗಿರಲಿಲ್ಲ. ಎರಡೂ ಪ್ರಕರಣಗಳು ಸ್ವಾಭಾವಿಕವಾಗಿ ಮತ್ತು ವಿರಳವಾಗಿ ಕಾಣಿಸಿಕೊಂಡ ಕಾರಣ ಕಲುಷಿತ ಆಹಾರ ಸೇವನೆ ಇದಕ್ಕೆ ಕಾರಣವಲ್ಲ ಎಂದು ಇಲಾಖೆ ಹೇಳಿದೆ.
ಬ್ರೆಝಿಲ್ ವಿಶ್ವದಲ್ಲಿ ಅತ್ಯಧಿಕ ಗೋಮಾಂಸ ರಫ್ತು ಮಾಡುವ ದೇಶವಾಗಿದ್ದರೆ , ಚೀನಾವು ಇಲ್ಲಿನ ಗೋಮಾಂಸದ ಬೃಹತ್ ಗ್ರಾಹಕ ದೇಶವಾಗಿದೆ. ಬ್ರೆಝಿಲ್ ನ 50%ಕ್ಕೂ ಅಧಿಕ ಗೋಮಾಂಸ ಚೀನಾ ಮತ್ತು ಹಾಂಕಾಂಗ್ ಗೆ ರಫ್ತಾಗುತ್ತದೆ. 1980ರ ದಶಕದಲ್ಲಿ ಬ್ರಿಟನ್ನಲ್ಲಿ ಮೊದಲ ಬಾರಿಗೆ ಪತ್ತೆಯಾದ ಹುಚ್ಚು ಹಸು ರೋಗ ಬಳಿಕ ಯುರೋಪ್ ನ ಮೂಲಕ ವಿಶ್ವದೆಲ್ಲೆಡೆ ಪ್ರಸಾರವಾಗಿದೆ. ರೋಗದ ಸೋಂಕು ತಗುಲಿ ಮೃತಪಟ್ಟ ಜಾನುವಾರುಗಳ ಮಾಂಸವನ್ನು ಬಳಸಿ ತಯಾರಿಸಿದ ಪಶು ಆಹಾರವನ್ನು ಸೇವಿಸುವ ಇತರ ಹಸುಗಳಿಗೆ ಈ ರೋಗ ಹರಡುತ್ತದೆ. ಸೋಂಕಿತ ಗೋಮಾಂಸ ಸೇವನೆಯಿಂದ ಮನುಷ್ಯರು ತೀವ್ರ ಅಸ್ವಸ್ಥಗೊಂಡು ಮೃತರಾಗುತ್ತಾರೆ.







