ಕೋವಿಡ್ ನಿಯಮ ಉಲ್ಲಂಘಿಸಿದ ಅರ್ಜೆಂಟೀನದ ನಾಲ್ವರು ಆಟಗಾರರು: ಬ್ರೆಝಿಲ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

photo: AP
ರಿಯೋ ಡಿ ಜನೈರೊ: ಅರ್ಜೆಂಟೀನದ ನಾಲ್ವರು ಪ್ರೀಮಿಯರ್ ಲೀಗ್ ಆಟಗಾರರು ಕೋವಿಡ್ ನಿಯಂತ್ರಣಕ್ಕೆ ರೂಪಿಸಲಾಗಿರುವ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ಕಾರಣ ಗೊಂದಲ ವಾತಾವರಣ ನಿರ್ಮಾಣವಾದ ಪರಿಣಾಮ ಅರ್ಜೆಂಟೀನ ಹಾಗೂ ಬ್ರೆಝಿಲ್ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಬ್ರೆಝಿಲ್ ನಲ್ಲಿ ಕೋವಿಡ್-19ನಿಂದಾಗಿ 5,80,000ಕ್ಕೂ ಅಧಿಕ ಬ್ರೆಝಿಲ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ಅಲ್ಲಿ ಕೋವಿಡ್ ಗಾಗಿ ಕಠಿಣ ನಿಯಮ ಜಾರಿಯಲ್ಲಿದೆ. ಬ್ರೆಝಿಲ್ ಪ್ರಜೆ ಅಲ್ಲದವರು ಕಳೆದ 2 ವಾರಗಳ ಕಾಲ ಇಂಗ್ಲೆಂಡ್ ನಲ್ಲಿದ್ದವರು ಕಡ್ಡಾಯ 14 ದಿನಗಳ ಕ್ವಾರಂಟೈನ್ ಪೂರೈಸಿರಬೇಕು.
ಆಸ್ಟನ್ ವಿಲ್ಲಾ ಪ್ರೀಮಿಯರ್ ಲೀಗ್ ಗೋಲ್ಕೀಪರ್ ಎಮಿಲಿಯಾನೊ ಮಾರ್ಟಿನೆಝ್ ಹಾಗೂ ಎಮಿಲಿಯಾನೊ ಬುಂಡಿಯಾ, ಟೊಟೆನ್ಹ್ಯಾಮ್ ಪ್ರೀಮಿಯರ್ ಲೀಗ್ ನ ಕ್ರಿಸ್ಟಿಯನ್ ರೊಮೆರೊ ,ಜಿಯೋವಾನಿ ಲೋ ಸೆಲ್ಸೊ ರವಿವಾರ ಮಧ್ಯಾಹ್ನ ಸಾವೊ ಪಾಲೊದ ನಿಯೋ ಕ್ವಿಮಿಕಾ ಅರೆನಾದಲ್ಲಿ ಪಿಚ್ನಲ್ಲಿದ್ದಾಗ ಬ್ರೆಝಿಲ್ ಫೆಡರಲ್ ಪೊಲೀಸರು ಹಾಗೂ ಆರೋಗ್ಯ ಸಂಸ್ಥೆ ಅಧಿಕಾರಿಗಳು ಮೈದಾನಕ್ಕೆ ಪ್ರವೇಶಿಸಿ ಪಂದ್ಯವನ್ನು ನಿಲ್ಲಿಸಿದರು.
ಮೈದಾನದಲ್ಲಿದ್ದ ಮೂವರು ಆಟಗಾರರು ಹಾಗೂ ಸ್ಟ್ಯಾಂಡ್ನಲ್ಲಿದ್ದ ಎಮಿಲಿಯಾನೊ ಬುಂಡಿಯಾ, ಬ್ರೆಝಿಲ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಬ್ರೆಝಿಲ್ ಗೆ ಪ್ರವೇಶಿಸುವ ಮೊದಲು ಕ್ವಾರಂಟೈನ್ ಪೂರೈಸಿದ್ದೇವೆ ಎಂದು ಸುಳ್ಳು ಹೇಳಿದ್ದರು ಎಂದು ವರದಿಯಾಗಿದೆ. ಹಿಂದಿನ 14 ದಿನಗಳಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಅಥವಾ ಭಾರತದಲ್ಲಿದ್ದ ಪ್ರಯಾಣಿಕರನ್ನು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.
ವೆನಿಜುವೆಲಾದಿಂದ ಶುಕ್ರವಾರ ಬ್ರೆಝಿಲ್ಗೆ ಆಗಮಿಸಿರುವ ನಾಲ್ವರು ಅರ್ಜೆಂಟೀನ ಆಟಗಾರರು ತಮ್ಮ ವಿಮಾನ ಹಾರಾಟ ಪೂರ್ವ ಆರೋಗ್ಯ ಘೋಷಣೆಗಳ ಬಗ್ಗೆ "ಸುಳ್ಳು ಮಾಹಿತಿ" ಒದಗಿಸಿದ್ದಾರೆ ಎಂಬ ವರದಿಗಳನ್ನು ಸ್ವೀಕರಿಸಿದ್ದೇವೆ ಎಂದು ಬ್ರೆಝಿಲ್ ಆರೋಗ್ಯ ಸಂಸ್ಥೆ ಅನ್ವಿಸಾ ಹೇಳಿದೆ.