ದಿಲ್ಲಿಯ ಸಿಂಘು ಗಡಿ ನಿರ್ಬಂಧ ತೆರವಿಗೆ ಆಗ್ರಹಿಸಿದ ಮನವಿ ತಿರಸ್ಕರಿಸಿದ ಸುಪ್ರೀಂ

ಹೊಸದಿಲ್ಲಿ, ಸೆ. 6: ಸಿಂಘು ಗಡಿಯನ್ನು ರೈತರು ನಿರ್ಬಂಧಿಸಿರುವುದರಿಂದ ತೊಂದರೆ ಎದುರಿಸುತ್ತಿದ್ದೇವೆ ಎಂದು ಹರ್ಯಾಣದ ಸೋನಿಪತ್ ನಿವಾಸಿಯೋರ್ವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಅಲ್ಲದೆ, ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ. ಸ್ಥಳೀಯ ಪರಿಸ್ಥಿತಿ ಹಾಗೂ ಏನು ನಡೆಯುತ್ತ್ತಿದೆ ಎಂಬ ಬಗ್ಗೆ ಉಚ್ಚ ನ್ಯಾಯಾಲಯಕ್ಕೆ ಚೆನ್ನಾಗಿ ತಿಳಿದಿರುವುದರಿಂದ ತಾವು ಮಧ್ಯಪ್ರವೇಶಿಸುವ ಅಗತ್ಯ ಇಲ್ಲ. ತಾವು ಉಚ್ಚ ನ್ಯಾಯಾಲಯದ ಮೇಲೆ ನಂಬಿಕೆ ಇರಿಸಬೇಕು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ತಾವು ಪ್ರಕರಣ ಆಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಅಲ್ಲದೆ, ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ದೂರುದಾರರ ಪರ ನ್ಯಾಯವಾದಿಗೆ ಸಲಹೆ ನೀಡಿತು. ಅನಂತರ ಮನವಿಯನ್ನು ದೂರುದಾರರು ಹಿಂದೆ ಪಡೆದರು.
‘‘ಪ್ರತಿಭಟನೆಯ ಸ್ವಾತಂತ್ರ ಹಾಗೂ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಸ್ವಾತಂತ್ರ್ಯದ ನಡುವಿನ ಸಮತೋಲನವನ್ನು ನಿರ್ವಹಿಸುವ ಉಚ್ಚ ನ್ಯಾಯಾಲಯನ್ನು ಸಂಪರ್ಕಿಸುವ ಸ್ವಾತಂತ್ರ್ಯ ದೂರುದಾರರಿಗೆ ಇದೆ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಪ್ರತಿಭಟನೆ ನಡೆಸುವ ಹಕ್ಕು ಹಾಗೂ ಇತರ ನಾಗರಿಕ ಹಕ್ಕಿನ ನಡುವೆ ಸಮತೋಲನದ ಪರಿಣಾಮಕಾರಿ ಆದೇಶವನ್ನು ಉಚ್ಚ ನ್ಯಾಯಾಲಯ ನೀಡಬಹುದು ಎಂದು ಪೀಠ ಹೇಳಿತು. ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರುt ಪ್ರತಿಭಟನೆ ನಡೆಸುತ್ತಿರುವುದರಿಂದ ಸೋನಿಪತ್ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸೋನಿಪತ್ನ ಓರ್ವ ನಿವಾಸಿ ಜೈ ಭಗವಾನ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.







