ಉತ್ತರಪ್ರದೇಶ: ಫಿರೋಝಾಬಾದ್ ನಲ್ಲಿ ಡೆಂಗಿ, ವೈರಸ್ ಜ್ವರದ 105 ಪ್ರಕರಣ ದಾಖಲು

ಹೊಸದಿಲ್ಲಿ, ಸೆ. 6: ಉತ್ತರಪ್ರದೇಶದ ಫಿರೋಝಾಬಾದ್ನಲ್ಲಿ ರವಿವಾರ 105ಕ್ಕೂ ಅಧಿಕ ಡೆಂಗಿ ಹಾಗೂ ವೈರಸ್ ಜ್ವರದ ಪ್ರಕರಣಗಳು ದಾಖಲಾಗಿವೆ. ಡೆಂಗಿ ಹಾಗೂ ವೈರಸ್ ಜ್ವರಕ್ಕೆ ಕಳೆದ 10 ದಿನಗಳಲ್ಲಿ 40 ಮಕ್ಕಳು ಸೇರಿದಂತೆ 51 ಮಂದಿ ಸಾವನ್ನಪ್ಪಿದ್ದಾರೆ. ಇದು ತೀವ್ರ ಹಾಗೂ ಕೆಲವು ಸಂದರ್ಭ ಮಾರಣಾಂತಿಕವಾಗುವ ರೀತಿಯ ರೋಗ ಎಂದು ಯುನೈಟೆಡ್ ಸ್ಟೇಟ್ಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಂಟೇಶನ್ ತಿಳಿಸಿದೆ.
ಫಿರೋಝಾಬಾದ್ ಆಸ್ಪತ್ರೆಯ ವಿವಿಧ ವಾರ್ಡ್ ಗಳಲ್ಲಿ 447 ರೋಗಿಗಳನ್ನು ದಾಖಲಿಸಲಾಗಿದೆ ಎಂದು ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು ಸೊಸೈಟಿಯ ಪ್ರಾಂಶುಪಾಲೆ ಡಾ. ಸಂಗೀತ ಅನೇಜಾ ತಿಳಿಸಿದ್ದಾರೆ. ‘‘ಇಂದು (ರವಿವಾರ) ಡೆಂಗಿ ಹಾಗೂ ವೈರಸ್ ಜ್ವರದ ಹೊಸ 105 ರೋಗಿಗಳನ್ನು ಇಲ್ಲಿ ದಾಖಲಿಸಲಾಗಿದೆ. 60 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಡೆಂಗಿ ಹಾಗೂ ವೈರಸ್ ಜ್ವರದಿಂದ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಕಳೆದ 24 ಗಂಟೆಗಳಲ್ಲಿ ಮಕ್ಕಳು ಸಾವನ್ನಪ್ಪಿಲ್ಲ’’ ಎಂದು ಅನೇಜಾ ತಿಳಿಸಿದ್ದಾರೆ.
ಫಿರೋಝಾಬಾದ್ ಹಾಗೂ ಸಮೀಪದ ಪ್ರದೇಶದಿಂದ ರವಿವಾರ ಸಂಗ್ರಹಿಸಲಾದ 200 ಮಾದರಿಯ ಶೇ. 50 ಮಾದರಿಗಳಲ್ಲಿ ಡೆಂಗಿ ಪಾಸಿಟಿವ್ ವರದಿ ಬಂದಿದೆ. ಎಂದು ಅವರು ಆರೋಗ್ಯ ಸಚಿವಾಲಯ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.





