ಹತಾಶೆಯಿಂದ ಗೊಂದಲ ಸೃಷ್ಟಿಸುತ್ತಿರುವ ವಿರೋಧ ಪಕ್ಷಗಳು: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ, ಸೆ.6: ಕೇಂದ್ರ ಮತ್ತು ಕರ್ನಾಟಕ ಸರಕಾರದ ಸಾಧನೆ ಹಾಗೂ ಬಂಟ್ವಾಳ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯವನ್ನು ನೋಡಿ ಸಹಿಸಲಾರದೆ ಹತಾಶೆಯಿಂದ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸಲು ಮುಂದಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಅವರು ಮಂಚಿ ಮತ್ತು ಸಾಲೆತ್ತೂರು ಗ್ರಾಮದ 9 ಬೂತ್ ಅಧ್ಯಕ್ಷರುಗಳ ಮನೆಗೆ ಬೇಟಿ ನೀಡಿ ಅಧ್ಯಕ್ಷ ರನ್ನು ಗೌರವಿಸಿ ಮನೆಗೆ ನಾಮಫಲಕ ಅನಾವರಣ ಮಾಡಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಕುಟುಂಬ ರಾಜಕಾರಣ ತತ್ವದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದ ಅವರು, ರಾಜಕೀಯದಲ್ಲಿ ಅಧಿಕಾರಕ್ಕೆ ಎಷ್ಟು ಶಕ್ತಿಯಿದೆಯೋ ಅಷ್ಟೇ ಶಕ್ತಿ ಪಕ್ಷ ಮತ್ತು ಸಂಘಟನೆಗಿದೆ. ಪಕ್ಷದ ಬೆಳವಣಿಗೆಗೆ ಸಂಘಟನಾತ್ಮಕ ಹೋರಾಟದ ಮೂಲಕ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಪಣತೊಡಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಪಕ್ಷದ ಪರಿಣಾಮಕಾರಿ ಸಂಘಟನೆಯ ದೆಸೆಯಲ್ಲಿ ಕಾರ್ಯಕರ್ತರು ಯಾರ ಜೊತೆಯೂ ಸಿದ್ದಾಂತದಲ್ಲಿ ರಾಜಿ ಮಾಡದೆ ಒಗ್ಗಟ್ಟಿನಿಂದ ಕೆಲಸ ಮಾಡಿ, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗಿನಿಂದಲೇ ತಯಾರಾಗುವಂತೆ ಕರೆ ನೀಡಿದರು.
ಮಂಚಿ ಗ್ರಾಮದ ಬೂತ್ ಅಧ್ಯಕ್ಷರಾದ ರಾಜೇಶ್ ಕುಕ್ಕಾಜೆ, ರಾಜೇಶ್ ನೂಜಿಪ್ಪಾಡಿ, ಪ್ರಭಾಕರ್ ಶೆಟ್ಟಿ, ಪುರುಷೋತ್ತಮ ಸಾಲಿಯಾನ್ ಮಂಚಿ, ರಮೇಶ್ ಪೂಜಾರಿ, ದಿನೇಶ್ ಸಾಲಿಯಾನ್, ಜಯ ಕಿಶೋರ್ ಮಂಚಿ ಮತ್ತು ಸಾಲೆತ್ತೂರು ಗ್ರಾಮದ ಬೂತ್ ಅಧ್ಯಕ್ಷರಾದ ನಾಗರಾಜ್ ಆಳ್ವ, ವಿದ್ಯೇಶ್ ರೈ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ನಾಮಫಲಕ ಅನಾವರಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮಂಚಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕಾಮತ್, ಉಪಾಧ್ಯಕ್ಷ ಮೋಹನ್ ದಾಸ ಶೆಟ್ಟಿ ಹಾಗೂ ಸದಸ್ಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.









