ಲಾಠಿಪ್ರಹಾರದ ವಿರುದ್ಧ ಕರ್ನಾಲ್ ನಲ್ಲಿ ನಾಳೆ ರೈತರ ಪ್ರತಿಭಟನೆ,ನಿಷೇಧಾಜ್ಞೆ ಜಾರಿ

ಚಂಡಿಗಡ,ಸೆ.6: ಕರ್ನಾಲ್ ನಲ್ಲಿ ಆ.28ರಂದು ನಡೆದಿದ್ದ ಪೊಲೀಸ್ ಲಾಠಿಪ್ರಹಾರವನ್ನು ಖಂಡಿಸಿ ಮಂಗಳವಾರ ಅಲ್ಲಿಯ ಮಿನಿ ಸಚಿವಾಲಯ ಕಟ್ಟಡದ ಎದುರು ರೈತರು ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಡಳಿತವು ಪ್ರದೇಶದಲ್ಲಿ ಐದು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಷೇಧಿಸಿ ಕಲಂ 144ರಡಿ ಆದೇಶವನ್ನು ಹೊರಡಿಸಿದೆ.
ಮಿನಿ ಸಚಿವಾಲಯಕ್ಕೆ ಮುತ್ತಿಗೆಗೆ ಮುನ್ನ ಮಹಾ ಪಂಚಾಯತ್ ಗೆ ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ಹಲವಾರು ರೈತ ಸಂಘಟನೆಗಳು ಕರೆ ನೀಡಿವೆ.
ಮಂಗಳವಾರ ಕರ್ನಾಲ್ನಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದ್ದು,ಬಳಿಕ ರೈತರು ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ತೆರಳಲಿದ್ದಾರೆ ಎಂದು ಹರ್ಯಾಣ ಭಾರತೀಯ ಕಿಸಾನ್ ಯೂನಿಯನ್ (ಚಾದುನಿ)ನ ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾದುನಿ ಅವರು ತಿಳಿಸಿದರು. ತನ್ನ ಬೇಡಿಕೆಗಳು ಈಡೇರದಿದ್ದರೆ ಸೆ.7ರಂದು ಕರ್ನಾಲ್ ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾನಿರತ ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಬೆದರಿಕೆಯನ್ನೊಡ್ಡಿದೆ.
ಆ.28ರಂದು ಕರ್ನಾಲ್ನಲ್ಲಿ ಬಿಜೆಪಿ ಸಭೆಯ ವಿರುದ್ಧ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ರೈತರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವುಂಟು ಮಾಡಿದ್ದ ಆರೋಪದಲ್ಲಿ ಪೊಲೀಸರು ಅವರ ವಿರುದ್ಧ ಲಾಠಿಪ್ರಹಾರವನ್ನು ನಡೆಸಿದ್ದರು. ಘಟನೆಯಲ್ಲಿ 10 ಜನರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಓರ್ವ ರೈತ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆದರೆ ಮೃತ ರೈತ ಪೊಲೀಸ್ ಲಾಠಿಪ್ರಹಾರದಲ್ಲಿ ಗಾಯಗೊಂಡಿರಲಿಲ್ಲ ಮತ್ತು ಹೃದಯಾಘಾತದಿಂದಾಗಿ ಸಾವು ಸಂಭವಿಸಿತ್ತು ಎಂದು ಆಡಳಿತವು ಹೇಳಿತ್ತು.
ಪ್ರತಿಭಟನಾನಿರತ ರೈತರ ತಲೆಗಳನ್ನು ಒಡೆಯುವಂತೆ ಪೊಲೀಸರಿಗೆ ಸೂಚಿಸಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಬೇಕು ಮತ್ತು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಎಸ್ಕೆಎಮ್ ಆಗ್ರಹಿಸಿದೆ.
ಹರ್ಯಾಣ ಸರಕಾರವು ಸಿನ್ಹಾ ಸೇರಿದಂತೆ 19 ಐಎಎಸ್ ಅಧಿಕಾರಿಗಳನ್ನು ಬುಧವಾರ ವರ್ಗಾವಣೆಗೊಳಿಸಿತ್ತು.







