ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧೆ
ಕೋಲ್ಕತಾ,ಸೆ.6: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೋಲ್ಕತಾದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸೆ.30ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಕಟಿಸಿದೆ.
ಟಿಎಂಸಿಯ ಮುಖ್ಯಸ್ಥೆಯೂ ಆಗಿರುವ ಬ್ಯಾನರ್ಜಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಶಾಸಕಿಯಾಗಿ ಆಯ್ಕೆಯಾಗುವುದು ಅಗತ್ಯವಾಗಿದೆ. ಕಳೆದ ಮಾರ್ಚ್-ಎಪ್ರಿಲ್ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವನ್ನು ಸಾಧಿಸಿದ್ದರೂ ನಂದಿಗ್ರಾಮ ಕ್ಷೇತ್ರದಲ್ಲಿ ಬ್ಯಾನರ್ಜಿಯವರು ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಎದುರು 1,956 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಸೆ.30ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಮತ್ತು ಶಂಶೇರ್ಗಂಜ್ ಕ್ಷೇತ್ರಗಳಲ್ಲಿಯೂ ಚುನಾವಣೆಗಳು ನಡೆಯಲಿದ್ದು,ಅನುಕ್ರಮವಾಗಿ ಜಾಕಿರ್ ಹುಸೇನ್ ಮತ್ತು ಅಮಿರುಲ್ ಇಸ್ಲಾಂ ಅವರನ್ನು ತನ್ನ ಅಭ್ಯರ್ಥಿಗಳನ್ನಾಗಿ ಟಿಎಂಸಿ ಪ್ರಕಟಿಸಿದೆ.
ಎಪ್ರಿಲ್-ಮೇ ವಿಧಾನಸಭಾ ಚುನಾವಣೆಗಳ ಎಂಟನೇ ಹಂತದಲ್ಲಿ ಇವೆರಡು ಕ್ಷೇತ್ರಗಳಲ್ಲಿ ಮತದಾನ ನಡೆದಿರಲಿಲ್ಲ. ಯುನೈಟೆಡ್ ಫ್ರಂಟ್ ಅಭ್ಯರ್ಥಿ ಪ್ರದೀಪ ನಂದಿಯವರ ನಿಧನದಿಂದಾಗಿ ಜಂಗಿಪುರ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಿಯಾಝುಲ್ ಹಕ್ ಅವರ ನಿಧನದಿಂದಾಗಿ ಶಂಶೇರ್ಗಂಜ್ ಕ್ಷೇತ್ರಗಳ ಚುನಾವಣೆಗಳು ಮುಂದೂಡಲ್ಪಟ್ಟಿದ್ದವು. ಈ ಇಬ್ಬರೂ ಅಭ್ಯರ್ಥಿಗಳು ಕೋವಿಡ್ನಿಂದ ಮೃತಪಟ್ಟಿದ್ದರು.
ಸೆ.30ರಂದು ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಇನ್ನೂ ಪ್ರಕಟಿಸಿಲ್ಲ. ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಅದು ಮಂಗಳವಾರ ಸಭೆಯನ್ನು ನಡೆಸುವ ನಿರೀಕ್ಷೆಯಿದೆ.
ಈ ಕೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಸೆ.13 ಕೊನೆಯ ದಿಂಕವಾಗಿದ್ದು, ಉಮೇದುವಾರಿಕೆಯನ್ನು ಹಿಂದೆಗೆದುಕೊಳ್ಳಲು ಸೆ.16 ಕೊನೆಯ ದಿನವಾಗಿದೆ. ಅ.3ರಂದು ಮತಗಳ ಎಣಿಕೆ ನಡೆಯಲಿದೆ.
ಭವಾನಿಪುರದಿಂದ ಆಯ್ಕೆಯಾಗಿದ್ದ ಹಿರಿಯ ಟಿಎಂಸಿ ನಾಯಕ ಶೋಭನದೇಬ್ ಚಟ್ಟೋಪಾಧ್ಯಾಯ ಅವರು ಮೇ 22ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬ್ಯಾನರ್ಜಿಯವರಿಗಾಗಿ ಕ್ಷೇತ್ರವನ್ನು ತೆರವುಗೊಳಿಸಿದ್ದರು.
2011 ಮತ್ತು 2016ರ ವಿಧಾನಸಭಾ ಚುನಾವಣೆಗಳಲ್ಲಿ ಭವಾನಿಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬ್ಯಾನರ್ಜಿ,ಈ ವರ್ಷದ ಚುನಾವಣೆಯಲ್ಲಿ ಅಧಿಕಾರಿಗೆ ಸವಾಲೊಡ್ಡಲು ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಟಿಎಂಸಿ ಯ ಪ್ರಭಾವಿ ನಾಯಕರಾಗಿದ್ದ ಅಧಿಕಾರಿ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.







