ಆಫ್ಘನ್ ವಿದ್ಯಾರ್ಥಿಗಳಿಂದ ವೀಸಾ ವಿಸ್ತರಿಸುವಂತೆ ಭಾರತ ಸರಕಾರಕ್ಕೆ ಮನವಿ
ಧಾರವಾಡ, ಸೆ.6: ಆಫ್ಘಾನಿಸ್ತಾನದಲ್ಲಿ ಸರಕಾರ ರಚನೆಗೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಇತ್ತ ಧಾರವಾಡ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ವೀಸಾ ವಿಸ್ತರಿಸುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಧಾರವಾಡ ಕೃಷಿ ವಿವಿಗೆ ವ್ಯಾಸಂಗ ಮಾಡಲು ಬಂದಿರುವ ಆಫ್ಘನ್ ಮೂಲದ ವಿದ್ಯಾರ್ಥಿಗಳು ಕೋರ್ಸ್ ಮುಗಿದು, ವೀಸಾ ಅವಧಿ ಮುಗಿಯುತ್ತಾ ಬಂದರೂ ಮರಳಿ ತಮ್ಮ ದೇಶಕ್ಕೆ ಹೋಗಲು ಬಯಸುತ್ತಿಲ್ಲ. ಕಾರಣ ಅಲ್ಲಿ ರಾಜಕೀಯ ಅಸ್ಥಿರತೆ ಉದ್ಭವವಾಗಿದೆ ಹಾಗೂ ಇನ್ನೂ ಯಾವುದೇ ಸರಕಾರ ಕೂಡ ರಚನೆ ಆಗಿಲ್ಲ. ಹೀಗಾಗಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಆಫ್ಘನ್ ಮೂಲದ ವಿದ್ಯಾರ್ಥಿಗಳು ಮರಳಿ ತಮ್ಮ ದೇಶಕ್ಕೆ ಹೋಗಲಾಗದೆ ಪರದಾಡುವಂತಾಗಿದೆ.
ಸದ್ಯ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಇಂಟರ್ ನ್ಯಾಷನಲ್ ಹಾಸ್ಟೆಲ್‍ನಲ್ಲಿ ಆಫ್ಘಾನಿಸ್ತಾನದ 10 ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಪೈಕಿ ಕೆಲವರ ಕೋರ್ಸ್ ಮುಕ್ತಾಯವಾಗಿದೆ. ಅವರ ವೀಸಾ ಅವಧಿಯೂ ಈ ಸೆಪ್ಟೆಂಬರ್‍ಗೆ ಕೊನೆಗೊಳ್ಳಲಿದೆ. ಅವಧಿ ಮುಗಿಯುವುದರೊಳಗೆ ಅವರು ತಮ್ಮ ದೇಶವನ್ನು ಸೇರಬೇಕು. ಆದರೆ ಇದೀಗ ಆಘ್ಘಾನಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಉದ್ಭವವಾಗಿರುವುದರಿಂದ ತಮ್ಮ ದೇಶಕ್ಕೆ ತೆರಳಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.
ಆಫ್ಘಾನ್ ವಿದ್ಯಾರ್ಥಿಗಳು ವಿವಿ ಕುಲಪತಿ ಡಾ.ಎಂ.ಬಿ. ಚೆಟ್ಟಿವರಿಗೆ ಮನವಿ ಸಲ್ಲಿಸಿದ್ದು, ತಾವು ಇನ್ನೂ ಕೆಲ ದಿನ ಇಲ್ಲಿಯೇ ಇರುವುದಾಗಿ ಕೇಳಿಕೊಂಡಿದ್ದಾರೆ. ಅಲ್ಲದೇ ಭಾರತ ಸರಕಾರಕ್ಕೆ ಕೂಡ ಮನವಿ ಸಲ್ಲಿಸಿದ್ದು, ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ಬಗ್ಗೆ ಸಭೆ ನಡೆಸಿರುವ ಕೃಷಿ ವಿವಿ ಕುಲಪತಿ ಡಾ.ಚೆಟ್ಟಿ, ಆದಷ್ಟು ಬೇಗನೇ ತೀರ್ಮಾನ ತೆಗೆದುಕೊಳ್ಳುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.







