ಭಟ್ಕಳ : ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸದಂತೆ ಸಾರ್ವಜನಿಕರಿಂದ ಮನವಿ

ಭಟ್ಕಳ : ತಾಲೂಕಿನ ಬಂದರ್ ರಸ್ತೆ, ಮಾವಿನಕುರ್ವೆ, ಬೆಳ್ನಿ, ಡೊಂಗರಪಳ್ಳಿ ಪ್ರದೇಶಗಳಲ್ಲಿ ಹಲವು ಮನೆಗಳು, ಧಾರ್ಮಿಕ ಕೇಂದ್ರಗಳು, ರೈತರ ಜಮೀನುಗಳು ಇದ್ದು, ಈ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೀವ್ರ ವಿರೋಧವಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾವಿನಕುರ್ವೆ ಅಧ್ಯಕ್ಷರಿಗೆ ಸಾರ್ವಜನಿಕರು ಮನವಿ ನೀಡಿದ್ದು, ಕಾಮಗಾರಿಯನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.
''ನಮ್ಮ ಈ ಜನವಸತಿ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಿದರೆ ಈ ಭಾಗದಲ್ಲಿ ರೋಗ ರುಜಿನಗಳು ಹರಡಲಿದ್ದು, ಬಾವಿ ನೀರು ಕಲುಷಿತಗೊಂಡು ನಂತರ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಈ ಭಾಗದಲ್ಲಿ ಮನೆಗಳು ಅಲ್ಲದೇ ಶಾಲೆ, ಮಸೀದಿ, ದೇವಸ್ಥಾನಗಳಿದ್ದು ಕಸ ವಿಲೇವಾರಿ ಘಟಕದಿಂದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ಇನ್ನು ಮುಂದೆ ಇಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಕೆಲಸ ಮುಂದುವರಿದರೆ ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. ಶೀಘ್ರ ಕಾಮಗಾರಿ ನಿಲ್ಲಿಸಬೇಕೆಂಬುದು ನಮ್ಮ ಆಗ್ರಹ'' ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ವಿಠಲ್ ನಾಯ್ಕ್, ಶ್ರೀನಿವಾಸ್ ನಾಯ್ಕ್, ದೊಡ್ಡಯ್ಯ ದೇವಾಡಿಗ, ಗಂಗಾಧರ್ ದೇವಾಡಿಗ, ರವಿ ನಾಯ್ಕ್, ಈಶ್ವರ್ ನಾಯ್ಕ್, ಮಂಜುನಾಥ್ ನಾಯ್ಕ್ ಹಾಗು ಇತರರು ಉಪಸ್ಥಿತರಿದ್ದರು.





