ಸ್ಮಾರ್ಟ್ ಸಿಟಿ ಮಂಗಳೂರಿನ ಸೊಳ್ಳೆ ಉತ್ಪಾದನಾ ಘಟಕಗಳು !
ಸರಕಾರಿ ಕಚೇರಿ ಸುತ್ತಮುತ್ತಲಲ್ಲೇ ಮಲೇರಿಯಾ ಭೀತಿ...!

ಮಂಗಳೂರು, ಸೆ. 7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಮಲೇರಿಯಾ ಪ್ರಕರಣಗಳು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಯಲ್ಲಿ ಕಂಡು ಬರುತ್ತಿರುವುದು ಈ ಬಾರಿಯೂ ಪುನಾರಾವರ್ತನೆಯಾಗಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಮಲೇರಿಯಾ ಹರಡುವ ಪ್ರದೇಶವಾಗಿ ಕುಖ್ಯಾತಿ ಪಡೆದಿದೆ.
ಇದಕ್ಕೆ ಪೂರಕವಾಗಿ ಸರಕಾರದ ಕಚೇರಿಗಳ ಆವರಣಗಳೇ ಮಲೇರಿಯಾಕ್ಕೆ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿಗೆ ತಾಣವಾಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಪ್ರಮುಖ ಸರಕಾರಿ ಆಸ್ಪತ್ರೆಯಾದ ವೆನ್ ಲಾಕ್ ಆಸ್ಪತ್ರೆಗೆ ಸೇರಿದ ಅತ್ತಾವರದಲ್ಲಿರುವ ಸ್ಥಳವನ್ನು ನಿರ್ಮಾಣ ಕಾಮಗಾರಿ ನಡೆಸುವ ಸಂಸ್ಥೆಗೆ ಡಂಪಿಂಗ್ ಯಾರ್ಡ್ ಆಗಿ ಬಿಟ್ಟು ಕೊಡಲಾಗಿದೆ. ಇದರ ಸುತ್ತಲೂ ಸಾಕಷ್ಟು ವಸತಿ ಸಮುಚ್ಚಯಗಳಿವೆ. ಆದರೆ ಇಲ್ಲಿ ಯಾವುದೇ ಸೂಕ್ತ ಸ್ವಚ್ಛತಾ ವ್ಯವಸ್ಥೆ ಅಥವಾ ಯೋಜನೆ ಇಲ್ಲದೆ ವಾಸದ ಶೆಡ್ ಗಳು, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಜಾಗದ ಒಂದು ಕಡೆ ಕಾಡು ಕುರುಚಲು ಗಿಡ ಗಂಟೆಗಳಿದ್ದರೆ ಇನ್ನೊಂದು ಕಡೆ ಬೇಕಾಬಿಟ್ಟಿ ಮಣ್ಣು ಹಾಗು ಇತರ ನಿರ್ಮಾಣ ಕಾಮಗಾರಿಯ ಪರಿಕರಗಳನ್ನು ರಾಶಿ ಹಾಕಲಾಗಿದೆ. ಬೇಕಾದಾಗ ಮಣ್ಣು ತೆಗೆದು ಈಗ ಈ ಸ್ಥಳದಲ್ಲಿಡೀ ಹೊಂಡಗಳು ನಿರ್ಮಾಣವಾಗಿ ಮಳೆ ನೀರು ನಿಂತಿದೆ. ಶೌಚಾಲಯದ ನೀರು ಹೋಗಲು ವ್ಯವಸ್ಥಿತವಾದ ಒಳಚರಂಡಿ ಹಾಗು ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲಿಲ್ಲ. ಹಾಗಾಗಿ ನಗರದ ಹೃದಯ ಭಾಗದಲ್ಲೇ, ನೂರಾರು ಮನೆಗಳ ನಡುವೆಯೇ ಒಂದು ಕಾಮಗಾರಿ ನಡೆಸುವವರ ಡಂಪಿಂಗ್ ಯಾರ್ಡ್ ನಿರ್ಮಾಣವಾಗಿದೆ.
ಇಲ್ಲಿ ನೀರು ನಿಂತು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ಸೊಳ್ಳೆ ಉತ್ಪತ್ತಿ ತಾಣವಾಗಿ ಬದಲಾಗುತ್ತಿದೆ.ಇಲ್ಲೆ ಸಣ್ಣ ಪುಟ್ಟ ಮನೆಗಳಲ್ಲಿ ಬಾಡಿಗೆ ಕೊಟ್ಟು ವಾಸಿಸುತ್ತಿರುವ ಕೆಲವರು ಇಲ್ಲಿನ ಸೊಳ್ಳೆ ಕಾಟ ತಾಳಲಾರದೆ ಮನೆ ಖಾಲಿ ಮಾಡಿದ್ದಾರೆ. ಸ್ವಂತ ಫ್ಲ್ಯಾಟ್ ಮನೆ ಹೊಂದಿರುವ ಈ ಪ್ರದೇಶದ ಜನ ಸೊಳ್ಳೆ ಕಾಟ, ಮಲೇರಿಯಾ ಭೀತಿಯಲ್ಲಿ ಬದುಕ ಬೇಕಾಗಿದೆ. ಈಗ ನಿಫಾ ಭಯವೂ ಜನರನ್ನು ಕಾಡುತ್ತಿದೆ. ಈ ಬಗ್ಗೆ ದೂರು ನೀಡಿದರೂ ಯಾವ ಸುಧಾರಣೆಯೂ ಆಗಿಲ್ಲ ಎಂದು ಇಲ್ಲಿ ನ ನಿವಾಸಿಗಳು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.
ಮಂಗಳೂರು ಜಿಲ್ಲಾ ಆಸ್ಪತ್ರೆ ದ.ಕ.ಜಿಲ್ಲೆ ಮಾತ್ರವಲ್ಲ ಕಾಸರ ಗೋಡು, ಕೊಡಗು, ಉಡುಪಿ, ಶಿವಮೊಗ್ಗ, ಚಿಕ್ಕಮ ಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಮುಖ ಕೇಂದ್ರ ಆಸ್ಪತ್ರೆ. ಇಲ್ಲೆ ಪಕ್ಕದಲ್ಲಿ ರೈಲು ನಿಲ್ದಾಣವಿದೆ. ಸಾಕಷ್ಟು ಅಂಗಡಿ ಮಳಿಗೆಗಳಿವೆ ಕೋವಿಡ್ ತಪಾಸಣಾ ಆಸ್ಪತ್ರೆ, ಮಕ್ಕಳ ಆಸ್ಪತ್ರೆ ಎಲ್ಲಾ ಪಕ್ಕದಲ್ಲೇ ಇದೆ. ಆದರೆ ಅಸ್ಪತ್ರೆಗೆ ಸೇರಿದ ಈ ಪ್ರದೇಶದ ಸ್ವಚ್ಛತೆಯ ಬಗ್ಗೆ ಈ ರೀತಿ ದಿವ್ಯ ನಿರ್ಲಕ್ಷ್ಯ ವಹಿಸಿದರೆ ಇಲ್ಲಿನ ನಿವಾಸಿಗಳು, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವವರು, ಹಾಗು ದೊಡ್ಡ ಸಂಖ್ಯೆಯಲ್ಲಿ ಇತರರಿಗೂ ಸಮಸ್ಯೆ ಯಾಗಲಿದೆ ಎನ್ನುವುದು ಇಲ್ಲಿನ ಸ್ಥಳೀಯರ ಆತಂಕ.
ಮಂಗಳೂರು ತಾಲೂಕು ಪಂಚಾಯತ್ ಗೆ ನೂತನ ಕಟ್ಟಡ ರಚನೆಯಾಗಿದೆ. ಇದು ವೆನ್ ಲಾಕ್ ಆಸ್ಪತ್ರೆ, ಸೆಂಟ್ರಲ್ ರೈಲು ನಿಲ್ದಾಣ, ಮಂಗಳೂರು ಪುರಭವನ, ಜನನಿಬಿಡ ಪ್ರದೇಶವಾದ ಮಂಗಳೂರು ಮಿನಿ ವಿಧಾನ ಸೌಧದ ಬಳಿ ಇದೆ. ಇಲ್ಲಿ ಕೆಳಗೆ ಒಂದು ಉಪಹಾರದ ಕ್ಯಾಂಟೀನ್ ಇದೆ. ಅದರ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇಲ್ಲಿ ಸಂಗ್ರಹವಾಗುವ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕಟ್ಟಡದ ಕೆಳಗೆ ನೀರು ನಿಂತು ಸೊಳ್ಳೆ ತಾಣವಾಗಿದೆ. ಇಲ್ಲಿನ ನಿವಾಸಿಗಳು ಸೊಳ್ಳೆ ಕಚ್ಚಿಸಿಕೊಂಡು ಮಲೇರಿಯಾ ಭೀತಿಯಲ್ಲಿ ಬದುಕುತ್ತಿದ್ದಾರೆ. ಇಲ್ಲಿನ ಕ್ಯಾಂಟೀನ್ ಗೆ ಉಪಹಾರ ಸೇವಿಸಲು ಬರುವವರು ಇಲ್ಲಿನ ಕೆಸರು,ನೀರು ನಿಂತಿರುವುದನ್ನು ಕಂಡು ಹಿಂದೆ ಹೋಗುತ್ತಿದ್ದಾರೆ. ಈ ರೀತಿ ನಗರದ ಪ್ರಮುಖ ಸರಕಾರಿ ಕಚೇರಿಗಳ ಆವರಣ ಸ್ವಚ್ಛತೆಗೆ ಮಾದರಿಯಾಗುವ ಬದಲು ಸೊಳ್ಳೆ ಉತ್ಪಾದನಾ ಘಟಕಗಳಾಗಿ ಸ್ಮಾರ್ಟ್ ಸಿಟಿಯ ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿಯನ್ನು ಹುಟ್ಟಿಸುತ್ತಿರುವುದು ವಿಪರ್ಯಾಸ.








