ವಿಜ್ಞಾನ ಸಂಶೋಧನೆಯಲ್ಲಿ ಬೀದರ್ ವಿದ್ಯಾರ್ಥಿ ಉವೈಸ್ ಅಹ್ಮದ್ ದೇಶದಲ್ಲೇ ದ್ವಿತೀಯ
ರಾಜ್ಯದ ಒಟ್ಟು 5 ವಿದ್ಯಾರ್ಥಿಗಳಿಗೆ ರಾಷ್ಟ್ರ ಪ್ರಶಸ್ತಿ

photo: twitter@IndiaDST
ಬೆಂಗಳೂರು, ಸೆ.8: ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಲಾಗುವ ರಾಷ್ಟ್ರಮಟ್ಟದ ಇನ್ಸ್ಪೈರ್ (INSPIRE- Innovation in Science Pursuit for Inspired Research) ಸ್ಪರ್ಧೆಯಲ್ಲಿ ರಾಜ್ಯದ ಐವರು ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ದೇಶದ ವಿವಿಧ ರಾಜ್ಯಗಳ 60 ವಿದ್ಯಾರ್ಥಿಗಳ ಪೈಕಿ ರಾಜ್ಯದ ಬೀದರ್ ನ 10ನೇ ತರಗತಿ ವಿದ್ಯಾರ್ಥಿ ಉವೈಸ್ ಅಹ್ಮದ್ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ಅಭಿನಂದಿಸಿದ್ದಾರೆ.
ಪ್ರಶಸ್ತಿ ವಿಜೇತರು
-ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಓವೈಸ್ ಅಹ್ಮದ್ ಅವರ Safety horizontal stretcher ಡಿ ಪ್ರಾಜೆಕ್ಟ್ 2ನೇ ಸ್ಥಾನ ಪಡೆದಿದೆ.
-ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದ ಜಿಎಂಎಚ್ಪಿಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೆ. ಸಮರ್ಥ ಅವರ Homemade brick lifting tool using scrap Iron ಪ್ರಾಜೆಕ್ಟ್.
-ರಾಮನಗರ ಜಿಲ್ಲೆ ಕನಕಪುರ ತಾಲೂಕು ಕಲ್ಲನಕುಪ್ಪೆಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದೇವೇಗೌಡ ರೂಪಿಸಿದ Advanced cattle shed ಪ್ರಾಜೆಕ್ಟ್.
-ವಿಜಯಪುರ ಜಿಲ್ಲೆಯ ಸರಕಾರಿ ಪ್ರೌಢ ಶಾಲೆ 10ನೇ ತರಗತಿ ವಿದ್ಯಾರ್ಥಿ ದೇವೀಂದ್ರ. ಬಿ. ಬಿರಾದಾರ್ ಅವರ Crop Cutter ಪ್ರಾಜೆಕ್ಟ್.
-ಬೆಂಗಳೂರಿನ ಜಾಲಹಳ್ಳಿಯ ಕೇಂದ್ರಿಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಆಯುಷ್ ಅವರ Road gullies ಪ್ರಾಜೆಕ್ಟ್ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ.







