ಧನ್ ಬಾದ್ ‘ಹಿಟ್ ಆ್ಯಂಡ್ ರನ್’ ಪ್ರಕರಣ: ಬಹುಮಾನ ಮೊತ್ತವನ್ನು 10 ಲಕ್ಷಕ್ಕೆ ಏರಿಸಿದ ಸಿಬಿಐ

ಹೊಸದಿಲ್ಲಿ, ಸೆ. 7: ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಇದುವರೆಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡುವವರಿಗೆ ಘೋಷಿಸಲಾಗಿದ್ದ ಬಹುಮಾನದ ಮೊತ್ತವನ್ನು ಸಿಬಿಐ 5 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡಿದೆ.
ನ್ಯಾಯಾಧೀಶರ ಹತ್ಯೆಗೆ ಸಂಬಂಧಿಸಿ ಯಾವುದೇ ರೀತಿಯ ಮಾಹಿತಿಯನ್ನು ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಆಗಸ್ಟ್ನಲ್ಲಿ ಆರಂಭದಲ್ಲಿ ಸಿಬಿಐ ಘೋಷಿಸಿತ್ತು. ಈಗ ಬಹುಮಾನದ ಮೊತ್ತವನ್ನು 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಘೋಷಿಸುವ ಭಿತ್ತಿ ಪತ್ರಗಳನನ್ನು ಗೋಡೆಗಳಲ್ಲಿ ಅಂಟಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಧೀಶ ಉತ್ತಮ್ ಆನಂದ್ ಅವರು ವಾಕಿಂಗ್ ಮಾಡುತ್ತಿದ್ದ ಸಂದರ್ಭ ಆಟೋ ರಿಕ್ಷಾವೊಂದು ಹಿಂದಿನಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಹಿರಾಪುರದಲ್ಲಿರುವ ನ್ಯಾಯಾಧೀಶರ ಕಾಲನಿಯಿಂದ 500 ಮೀಟರ್ಗಿಂತಲೂ ಕಡಿಮೆ ದೂರ ಇರುವ ಗಾಲ್ಫ್ ಮೈದಾನದ ಸಮೀಪ ಈ ದುರ್ಘಟನೆ ಸಂಭವಿಸಿತ್ತು. ಈ ಅಪಘಾತದಲ್ಲಿ ಅವರ ಸಾವಿನ ಬಗ್ಗೆ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉತ್ತಮ್ ಆನಂದ್ ಅವರ ತಲೆ, ಎದೆ ಹಾಗೂ ಬೆನ್ನಿಗೆ ತೀವ್ರ ಗಾಯವಾಗಿರುವುದು ಬೆಳಕಿಗೆ ಬಂದಿತ್ತು. ಹರಿತವಾದ ಹಾಗೂ ಗಟ್ಟಿಯಾದ ವಸ್ತುವಿನಿಂದ ದಾಳಿ ನಡೆಸಿರುವುದು ಸಾವು ಸಂಭವಿಸಲು ಕಾರಣ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿತ್ತು.







