ಹಿಂಸಾಚಾರ ಸಂಸ್ಕೃತಿಗೆ ಪಾಕ್ ಪ್ರಚೋದನೆ ನೀಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ

photo: twitter.com/IndiaUNNewYork
ವಿಶ್ವಸಂಸ್ಥೆ, ಸೆ.8: ಪಾಕಿಸ್ತಾನ ತನ್ನ ನೆಲದಲ್ಲಿ ಮತ್ತು ಗಡಿಯುದ್ದಕ್ಕೂ ಹಿಂಸಾಚಾರದ ಸಂಸ್ಕೃತಿಗೆ ಪ್ರಚೋದನೆ ನೀಡುವುದನ್ನು ಮುಂದುವರಿಸಿದೆ ಎಂದು ಭಾರತ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪಾಕಿಸ್ತಾನಕ್ಕೆ ಇದಿರೇಟು ನೀಡಿದೆ .
‘ಕೋವಿಡ್ ನಂತರದ ಚೇತರಿಕೆಯಲ್ಲಿ ಪುನಶ್ಚೇತನ ಮತ್ತು ಅಂತರ್ವೇಶನ(ಒಳಗೂಡಿಸುವಿಕೆ) ಶಾಂತಿ ಸಂಸ್ಕೃತಿಯ ಪರಿವರ್ತಕ ಪಾತ್ರ’ ಎಂಬ ವಿಷಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ವಿದಿಷಾ ಮೈತ್ರಾ, ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯಿದ್ ಅಲಿಶಾ ಗೀಲಾನಿ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿ ಪಾಕಿಸ್ತಾನದ ರಾಯಭಾರಿ ಮುನೀರ್ ಆಲಮ್ ಅವರ ಹೇಳಿಕೆಯನ್ನು ಖಂಡಿಸಿದರು.
ಗೀಲಾನಿಯವರ ಅಂತ್ಯಸಂಸ್ಕಾರ ವಿಧಿವತ್ತಾಗಿ ನಡೆದಿರಲಿಲ್ಲ ಮತ್ತು ತಮಗೆ ಭಾಗವಹಿಸಲು ಅವಕಾಶ ನೀಡಿರಲಿಲ್ಲ ಎಂದು ಗೀಲಾನಿಯವರ ಕುಟುಂಬದವರು ಆರೋಪಿಸಿದ್ದರು. ಈ ಆರೋಪವನ್ನು ಪಾಕಿಸ್ತಾನದ ರಾಯಭಾರಿ ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಸ್ತಾವಿಸಿದ್ದರು. ಅಂತ್ಯಸಂಸ್ಕಾರದ ವೀಡಿಯೊವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡುವ ಮೂಲಕ ಕುಟುಂಬದವರ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದರು.
ವಿಶ್ವಸಂಸ್ಥೆಯ ವೇದಿಕೆಯನ್ನು ಭಾರತದ ವಿರುದ್ಧದ ದ್ವೇಷಮಾತಿಗೆ ಬಳಸುವ ಪಾಕ್ ನಿಯೋಗದ ಮತ್ತೊಂದು ಪ್ರಯತ್ನಕ್ಕೆ ನಾವಿಂದು ಸಾಕ್ಷಿಗಳಾಗಿದ್ದೇವೆ. ಇಂತಹ ಎಲ್ಲಾ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ. ಶಾಂತಿಯ ಸಂಸ್ಕೃತಿಯು ಸಭೆಗಳಲ್ಲಿ ಮತ್ತು ಸಮಾವೇಶಗಳಲ್ಲಿ ಚರ್ಚೆಗೆ ಒಳಪಡುವ ಹಾಗೂ ಸಂಭ್ರಮಿಸುವ ಅಮೂರ್ತ ವೌಲ್ಯ ಅಥವಾ ಸಿದ್ಧಾಂತಗಳಲ್ಲ. ಇದು ಸದಸ್ಯ ರಾಷ್ಟ್ರಗಳ ನಡುವಿನ ಜಾಗತಿಕ ಸಂಬಂಧಗಳಲ್ಲಿ ಸಕ್ರಿಯವಾಗಿ ಒಳಗೊಂಡಿರಬೇಕು ಎಂದು ವಿದಿಷಾ ಮೈತ್ರಾ ಹೇಳಿದರು.
ಬಹುತ್ವ, ಸಹಾನುಭೂತಿ, ಸಾಂಸ್ಕತಿಕ ವೈವಿಧ್ಯತೆ ಮತ್ತು ಸಂವಾದದ ಮೂಲಕ ಇಂತಹ ಶಾಂತಿಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಬಹುದು. ಭಾರತ ಎಂದಿಗೂ ಮಾನವತೆ, ಪ್ರಜಾತಂತ್ರ ಮತ್ತು ಅಹಿಂಸೆಯ ಪರವಾಗಿದೆ ಎಂದ ಅವರು, ವಿಶ್ವಸಂಸ್ಥೆಯ ವೇದಿಕೆಯಲ್ಲಿ ಧರ್ಮದ ವಿಷಯದ ಬಗ್ಗೆ ವಸ್ತುನಿಷ್ಟ ಮತ್ತು ನಿಷ್ಪಕ್ಷಪಾತ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.
ತಮ್ಮ ಕೃತ್ಯಗಳನ್ನು ಸಮರ್ಥಿಸಲು ಧರ್ಮವನ್ನು ಬಳಸಿಕೊಳ್ಳುವ ಭಯೋತ್ಪಾದಕರು ಹಾಗೂ ಅವರ ಕೃತ್ಯಕ್ಕೆ ಬೆಂಬಲ ನೀಡುವವರ ಬಗ್ಗೆ ವಿಶ್ವ ಎಚ್ಚರಿಕೆಯಿಂದ ಇರಬೇಕಾಗಿದೆ. ಶಾಂತಿಯ ಸಂಸ್ಕೃತಿಗೆ ಅಡ್ಡಿ ಉಂಟುಮಾಡುವ ಇಂತಹ ವಿಷಯಗಳಿಂದ ವಿಶ್ವಸಂಸ್ಥೆ ದೂರ ಇರಬೇಕು ಎಂದವರು ಹೇಳಿದ್ದಾರೆ.







