ರಶ್ಯಾ: ನೀರಿಗೆ ಬಿದ್ದವರನ್ನು ರಕ್ಷಿಸುವ ಪ್ರಯತ್ನದಲ್ಲಿ ಸಚಿವ ಮೃತ್ಯು

photo: twitter.com/TRTWorldNow
ಮಾಸ್ಕೋ, ಸೆ.8: ಮಾಸ್ಕೋದ ಈಶಾನ್ಯದಲ್ಲಿರುವ ನೊರಿಲ್ಸ್ಕ್ ಪ್ರಾಂತ್ಯದಲ್ಲಿ ಅಗ್ನಿಶಾಮಕ ಪಡೆ ಹಾಗೂ ಶೋಧ ಮತ್ತು ರಕ್ಷಣೆ ಕಾರ್ಯಾಚರಣೆ ತಂಡದ ತರಬೇತಿ ಕಾರ್ಯಕ್ರಮದ ಸಂದರ್ಭ ಕಾಲುಜಾರಿ ನೀರಿಗೆ ಬಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸುವ ಪ್ರಯತ್ನದಲ್ಲಿ ರಶ್ಯಾದ ತುರ್ತುನೆರವು ಇಲಾಖೆ ಸಚಿವ ಯೂಜಿನಿ ಝಿನಿಚೆವ್ ಮೃತಪಟ್ಟಿದ್ದಾರೆ ಎಂದು ರಶ್ಯಾ ಸುದ್ಧಿಸಂಸ್ಥೆ ಬುಧವಾರ ವರದಿ ಮಾಡಿದೆ.
ನೊರಿಲ್ಸ್ಕ್ ಪ್ರಾಂತ್ಯದಲ್ಲಿ ನಿರ್ಮಿಸಲಾಗುತ್ತಿರುವ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸಚಿವ ಯೂಜಿನಿ, ಅಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈ ಸಂದರ್ಭ ಕಾರ್ಯಕ್ರಮದ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಕೆಮರಾಮ್ಯಾನ್ ಕಾಲು ಜಾರಿ ನೀರಿಗೆ ಬಿದ್ದರು. ಅಲ್ಲಿ ಸೇರಿದ್ದ ಹಲವು ಮಂದಿ ಈ ಘಟನೆಯಿಂದ ದಿಗ್ಭ್ರಾಂತರಾಗಿ ನೋಡುತ್ತಿದ್ದಂತೆಯೇ ಸಚಿವರು, ಆತನನ್ನು ರಕ್ಷಿಸಲು ನೀರಿಗೆ ಧುಮುಕಿದರು. ಆದರೆ ದುರದೃಷ್ಟವಶಾತ್ ನೀರಿನಲ್ಲಿದ್ದ ಬಂಡೆಗೆ ಅವರ ದೇಹ ಅಪ್ಪಳಿಸಿ ಮೃತಪಟ್ಟರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಸ್ಕೋ ಟೈಮ್ಸ್ ವರದಿ ಮಾಡಿದೆ.
1980ರ ದಶಕದಲ್ಲಿ ಕೆಜಿಬಿ(ರಶ್ಯಾದ ಗುಪ್ತಚರ ಸಂಸ್ಥೆ)ಯ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದ ಯೂಜಿನಿ ಕ್ರಮೇಣ ಪದೋನ್ನತಿ ಹೊಂದಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭದ್ರತಾ ಪಡೆಯಲ್ಲಿದ್ದರು. 2018ರಲ್ಲಿ ರಶ್ಯಾದ ತುರ್ತು ಸಂದರ್ಭದ ನೆರವು ಇಲಾಖೆು ಸಚಿವರಾಗಿ ನೇಮಕಗೊಂಡಿದ್ದರು.





