ಪ್ರಚೋದನಕಾರಿ ಗೋಡೆ ಬರಹ ಪ್ರಕರಣ: ಆರೋಪಿಗಳಿಗೆ ಜಾಮೀನು
ಮಂಗಳೂರು, ಸೆ.8: ನಗರದಲ್ಲಿ ಕಂಡುಬಂದಿದ್ದ ಪ್ರಚೋದನಕಾರಿ ಗೋಡೆ ಬರಹದ ಮೂವರು ಆರೋಪಿಗಳು ಜಾಮೀನು ಪಡೆದು ಜೈಲ್‌ನಿಂದ ಬಿಡುಗಡೆಯಾಗಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ ಎಂಬಾತ ಬಂಧಿತನಾದ ಎರಡು ತಿಂಗಳಲ್ಲೇ ಮಂಗಳೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಮೂಲಕ ಬಿಡುಗಡೆ ಹೊಂದಿದ್ದ. ಜಾಮೀನು ಸಿಗದೆ ಜೈಲ್‌ನಲ್ಲೇ ಇದ್ದ ಇನ್ನಿಬ್ಬರು ಆರೋಪಿಗಳಾದ ತೀರ್ಥಹಳ್ಳಿಯ ಮುಹಮ್ಮದ್ ಶಾರೀಕ್ ಮತ್ತು ಸಾದತ್ ಹುಸೈನ್ ವಾರದ ಹಿಂದೆ ಹೈಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಕಳೆದ ನ.27ರಂದು ಮಂಗಳೂರು ಪೂರ್ವ (ಕದ್ರಿ) ಠಾಣೆ ಬಳಿ ಬಿಜೈಯಲ್ಲಿ ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಪ್ರಚೋದನಕಾರಿ ಬರಹ ಕಂಡು ಬಂದಿತ್ತು. ವಿದ್ಯಾರ್ಥಿ ಮಾಝ್ ಮುನೀರ್ ಅಹ್ಮದ್ ಮತ್ತು ಮುಹಮ್ಮದ್ ಶಾರೀಕ್ ಗೋಡೆ ಬರಹ ಬರೆದಿದ್ದರು ಎನ್ನಲಾದ ಆರೋಪಿಗಳಾಗಿದ್ದು, ಇಬ್ಬರೂ ತೀರ್ಥಹಳ್ಳಿ ಮೂಲದವರು.
ಮಾಝ್ ಮುನೀರ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿಕೊಂಡು ಆರ್ಯ ಸಮಾಜ ರಸ್ತೆಯಲ್ಲಿ ಫ್ಲ್ಯಾಟ್ ಒಂದರಲ್ಲಿ ನೆಲೆಸಿದ್ದ. ಶಾರೀಕ್ ಈತನ ಗೆಳೆಯನಾಗಿದ್ದು, ಮಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಇವರಿಬ್ಬರಿಗೂ ಆಶ್ರಯ ಮತ್ತು ಹಣಕಾಸು ನೆರವು ನೀಡಿದ್ದ ಆರೋಪದಲ್ಲಿ ವಾರದ ನಂತರ ಸಾದತ್ ಹುಸೈನ್ ಎಂಬಾತನನ್ನು ಬಂಧಿಸಲಾಗಿತ್ತು.
ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಮಂಗಳೂರಿಗೆ ಬಂದು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಆದರೆ, ಇವರಿಗೆ ಬೇರಾವುದೇ ಉಗ್ರ ಸಂಪರ್ಕ ಇಲ್ಲ ಎಂಬ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಹಿಂತಿರುಗಿದ್ದರು.
ಆರೋಪಿಗಳಿಗೆ ಪ್ರೇರಣೆ ನೀಡಿದ್ದ ವ್ಯಕ್ತಿಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಈ ವ್ಯಕ್ತಿಯು ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆಯೇ ಸೌದಿ ಅರೇಬಿಯಾಕ್ಕೆ ತೆರಳಿದ್ದ ಎನ್ನಲಾಗಿದೆ. ಗೋಡೆ ಬರಹದಲ್ಲಿ ಯಾವ ರೀತಿಯ ವಿಷಯ ಇರಬೇಕೆಂದು ಹೇಳಿದ್ದಲ್ಲದೆ, ಹೀಗೆಯೇ ಬರೆಯುವಂತೆ ಸೂಚಿಸಿದ್ದು ಕೂಡ ಈ ವ್ಯಕ್ತಿ ಎನ್ನುವ ವಿಚಾರವನ್ನು ವಿಚಾರಣೆ ವೇಳೆ ಬಾಯ್ದಿಟ್ಟಿದ್ದರು ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.







