ದಿಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಎಐಎಂಎಸ್‌ಎಸ್ ಆಗ್ರಹ

ಬೆಂಗಳೂರು, ಸೆ. 8: ‘ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ 21 ವರ್ಷದ ಪೊಲೀಸ್ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನ ತಪ್ಪಿತಸ್ಥರನ್ನು ನಿಷ್ಪಕ್ಷಪಾತವಾದ ತನಿಖೆಗೆ ಒಳಪಡಿಸಿ, ನಿದರ್ಶನೀಯ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿ ಎಐಎಂಎಸ್‌ಎಸ್ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಮೇಣದಬತ್ತಿ(ಕ್ಯಾಂಡಲ್ ಲೈಟ್) ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ನೂರಾರು ವಿದ್ಯಾರ್ಥಿನಿಯರು ಹಾಗೂ ಮಹಿಳಾ ಕಾರ್ಯಕರ್ತರು ಅತ್ಯಾಚಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮುಖಂಡರು, ‘ಹೊಸದಿಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ‘ಇತ್ತೀಚೆಗಷ್ಟೇ ದಿಲ್ಲಿಯಲ್ಲಿ 9 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಗೆ ಸಾಕ್ಷಿಯಾಗಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಪಿಜಿ ವಿದ್ಯಾರ್ಥಿನಿಯ ಅತ್ಯಾಚಾರದ ವರದಿಯಾಗಿದೆ. ಹೀಗೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಪ್ರಕರಣದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಯುವತಿಯೇ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಗೆ ತುತ್ತಾಗಿದ್ದಾಳೆ.
ಹಾಗಾದರೆ ಸಾಮಾನ್ಯ ಹೆಣ್ಣುಮಕ್ಕಳ ರಕ್ಷಣೆ ಹೇಗೆ ಸಾಧ್ಯ? ಕಠಿಣ ಶಿಕ್ಷೆಯ ಭಯ ಇಲ್ಲದಿರುವುದರಿಂದಲೇ ಇಂತಹ ಅಪರಾಧಗಳು ಹೆಚ್ಚಾಗಲು ಕಾರಣವಾಗಿದೆ. ಆದುದರಿಂದ ಅತ್ಯಾಚಾರ, ಮಹಿಳೆಯರಿಗೆ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಹೋರಾಟದಲ್ಲಿ ಸಂಘಟನೆಯ ಬೆಂಗಳೂರು ಜಿಲ್ಲಾ ಅಧ್ಯಕ್ಷೆ ಹೇಮಾವತಿ ಕೆ., ಜಿಲ್ಲಾ ಕಾರ್ಯದರ್ಶಿ ಶಾಂತಾ ಎ., ಸದಸ್ಯರಾದ ರುಕ್ಮಿಣಿ, ಸುನಿತಾ ಇನ್ನಿತರು ಪಾಲ್ಗೊಂಡಿದ್ದರು.
.jpeg)







