ದ.ಕ.ಜಿಲ್ಲೆಯಲ್ಲಿ ಮೊಂತಿ ಹಬ್ಬದ ಸಂಭ್ರಮ

ಮಂಗಳೂರು, ಸೆ.8: ದ.ಕ.ಜಿಲ್ಲಾದ್ಯಂತ ಕೆಥೋಲಿಕ್ ಕ್ರೈಸ್ತರು ಬುಧವಾರ ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಚರ್ಚ್‌ಗಳಲ್ಲಿ ಕೋವಿಡ್ ನಿಯಮವಳಿಗಳನ್ನು ಪಾಲನೆ ಮಾಡಿಕೊಂಡು ವಿಶೇಷ ಬಲಿಪೂಜೆಯಲ್ಲಿ ಪಾಲ್ಗೊಂಡರು. ಅದರಲ್ಲೂ ಕೋವಿಡ್ ಹಿನ್ನೆಲೆಯಲ್ಲಿ ಸಾಮೂಹಿಕ ಬಲಿಪೂಜೆಯ ಬದಲು ಮೂರ್ನಾಲ್ಕು ಗುಂಪುಗಳಾಗಿ ಬಲಿಪೂಜೆಗಳನ್ನು ನೆರವೇರಿಸಿದರು. ಅಲ್ಲದೆ ಮಾತೆ ಮೇರಿಗೆ ಹೂ ಅರ್ಪಿಸಿ ನೊವೆನಾ ಪ್ರಾರ್ಥನೆ ಸಲ್ಲಿಸಿದರು.
ಏಸು ಕ್ರೈಸ್ತರ ಮಾತೆ ಮೇರಿಯ ಹುಟ್ಟು ಹಬ್ಬವನ್ನು ಕೆಥೋಲಿಕ್ ಕ್ರೈಸ್ತರು ಕುಟುಂಬ ಸಮೇತ ಆಶೀರ್ವಚನ ಮಾಡಿದ ಭತ್ತದ ತೆನೆಯ ಕಾಳುಗಳನ್ನು ಹಾಲು/ಪಾಯಸದಲ್ಲಿ ಬೆರೆಸಿ ಸೇವಿಸುವ ಮೂಲಕ ಸಸ್ಯಾಹಾರ ಊಟ ಮಾಡುವುದು ಈ ಹಬ್ಬದ ವಿಶೇಷವಾಗಿದೆ. ಹಬ್ಬದ ಸಂತೋಷ ಹಂಚಿಕೊಳ್ಳಲು ಎಲ್ಲ ಭಕ್ತಾದಿಗಳಿಗೆ ಕಬ್ಬು ವಿತರಣೆ ಮಾಡಲಾಯಿತು. ಕೆಲ ವು ಚರ್ಚ್‌ಗಳಲ್ಲಿ ಆಹಾರ ಸಾಮಗ್ರಿ ವಿತರಿಸಿ ಹಬ್ಬದ ಸಂಭ್ರಮದಿಂದ ವಂಚಿತರಾಗದಂತೆ ನೋಡಿಕೊಂಡರು.
ಮಧ್ಯಾಹ್ನದ ಬಳಿಕ ಚರ್ಚ್ ವ್ಯಾಪ್ತಿಯಲ್ಲಿ ವಿವಿಧ ಸ್ಪರ್ಧೆ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಆದರೆ ಕೋವಿಡ್ ನಿಂದಾಗಿ ಈ ಮನೋರಂಜನೆ ಮತ್ತು ಸ್ಪರ್ಧೆಗಳನ್ನು ರದ್ದು ಮಾಡಲಾಗಿತ್ತು.
ವಿಶೇಷ ಬಲಿಪೂಜೆಗಳು: ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ನಡೆದ ವಿಶೇಷ ಬಲಿಪೂಜೆಗಳ ನೇತೃತ್ವವನ್ನು ಸಂತ ಆಂತೋನಿ ಆಶ್ರಮ ಜೆಪ್ಪುವಿನಲ್ಲಿ ಡಾ. ಒನಿಲ್ ಡಿಸೋಜ, ಮಿಲಾಗ್ರಿಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ಡಾ. ಬೊನವೆಂಚರ್ ನಜರೇತ್, ಬಿಕರ್ನ ಕಟ್ಟೆ ಬಾಲಯೇಸು ಮಂದಿರಲ್ಲಿ ಡಾ. ರೋವಿಲ್, ಉರ್ವ ಚರ್ಚಿನಲ್ಲಿ ಡಾ. ಬೊನಿಸಾಸ್ ಪಿಂಟೋ ವಹಿಸಿದ್ದರು.













