ಮೂಡಿಗೆರೆ: ನವಜಾತ ಶಿಶುವನ್ನು ಪೊದೆಯಲ್ಲಿಟ್ಟು ಹೋದ ಮಹಿಳೆ; ಗ್ರಾಮಸ್ಥರಿಂದ ರಕ್ಷಣೆ

ಮಗುವನ್ನು ರಕ್ಷಿಸಿದ ಸ್ಥಳೀಯರು
ಮೂಡಿಗೆರೆ, ಸೆ.8: ಪಟ್ಟಣ ಸಮೀಪದ ಬಿಳಗುಳ ಗ್ರಾಮದ ಪೊದೆಯೊಂದರಲ್ಲಿ ಗಂಡು ನವಜಾತ ಶಿಶುವನ್ನು ಅನಾಥವಾಗಿ ಇಟ್ಟು ಹೋಗಿರುವ ಮನಕಲಕುವ ಘಟನೆ ಬುಧವಾರ ನಡೆದಿದ್ದು, ಬುಧವಾರ ಬೆಳಿಗ್ಗೆ ದಾರಿಹೋಕರು ಮಗುವಿನ ಅಳುವಿನ ಧ್ವನಿ ಕೇಳಿಸಿಕೊಂಡು ಪರಿಶೀಲಿಸಿದಾಗ ನವಜಾತ ಗಂಡು ಶಿಶುವನ್ನು ಅನಾಥವಾಗಿ ಪೊದೆಯಲ್ಲಿ ಇರಿಸಿ ಹೋಗಿರುವುದು ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಿ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕಿನ ತ್ರಿಪುರ ಗ್ರಾಮದ ವ್ಯಕ್ತಿಯೊಬ್ಬರು ಕೂಲಿ ಕೆಲಸ ಮಾಡಿಕೊಂಡಿದ್ದು, ಅದೇ ಗ್ರಾಮದ ಮಹಿಳೆಯೊಬ್ಬರನ್ನು 4ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ 3 ವರ್ಷದ ಗಂಡು ಮಗುವಿತ್ತು, ಈ ಮಹಿಳೆ ಸದ್ಯ ಮಾನಸಿಕ ಅಸ್ವಸ್ಥೆಯಾಗಿದ್ದು, 12ದಿನಗಳ ಹಿಂದೆ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಈಕೆಗೆ ಹೆರಿಗೆಯಾಗಿ 4ದಿನಗಳ ಹಿಂದೆಯೇ ಡಿಸ್ಚಾರ್ಜ್ ಆಗಿದೆ. ಹೆರಿಗೆ ಬಳಿಕ ಮತ್ತೊಂದು ಗುಂಡು ಮಗು ಜನಿಸಿದ್ದರಿಂದ ಮಗುವನ್ನು ಸಾಕಲು ಕಷ್ಟವಾಗುತ್ತದೆ ಎಂದು ಪೊದೆಯಲ್ಲಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಚಿಕ್ಕಮಗಳೂರು ಮಕ್ಕಳ ಕಲ್ಯಾಣ ಸಮಿತಿಗೆ ಮಗುವನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆ ಬಳಿಕ ಮಗುವಿನ ತಂದೆ ತಾಯಿ ಯಾರೆಂಬುದು ತಿಳಿದು ಬರಬೇಕಿದೆ.





