ಕೆಳ ನ್ಯಾಯಾಲಯದಲ್ಲಿಯ ಕಲಾಪಗಳಿಗೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ
ಜ್ಞಾನವಾಪಿ ಮಸೀದಿ ಹಕ್ಕು ವಿವಾದ

ಅಲಹಾಬಾದ್ (ಉ.ಪ್ರ).ಸೆ.9: ವಾರಣಾಸಿಯ ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಸ್ಥಾನ ಹಕ್ಕು ವಿವಾದ ಪ್ರಕರಣದಲ್ಲಿ ಕೆಳ ನ್ಯಾಯಾಲಯದಲ್ಲಿ ಕಲಾಪಗಳಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಗುರುವಾರ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ. ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮಸೀದಿಯ ಆವರಣದ ಸಮಗ್ರ ಭೌತಿಕ ಸರ್ವೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೆ(ಎಎಸ್‌ಐ)ಗೆ ನಿರ್ದೇಶಿಸಿ ಕೆಳ ನ್ಯಾಯಾಲಯವು ಹೊರಡಿಸಿದ್ದ ಆದೇಶವೂ ತಡೆಯಾಜ್ಞೆಯ ವ್ಯಾಪ್ತಿಯಲ್ಲಿ ಸೇರಿದೆ. ನ್ಯಾಯಾಲಯದಲ್ಲಿ ಬಾಕಿಯಿರುವ 1991ರ ಮೂಲದಾವೆಯಲ್ಲಿ ಮುಂದಿನ ವಿಚಾರಣೆಗೆ ಅ.8ರವರೆಗೆ ತಡೆಯಾಜ್ಞೆಯನ್ನು ಉಚ್ಚ ನ್ಯಾಯಾಲಯವು ನೀಡಿದೆ.
ವಾರಣಾಸಿಯ ಕೆಳ ನ್ಯಾಯಾಲಯವನ್ನು ತೀವ್ರ ತರಾಟೆ ಗೆತ್ತಿಕೊಂಡ ನ್ಯಾ.ಪ್ರಕಾಶ ಪಾಡಿಯಾ ಅವರು,ಬಾಕಿಯಿರುವ ಮೂಲ ಅರ್ಜಿಗಳಲ್ಲಿ ತನ್ನ ತೀರ್ಪನ್ನು ಮಾ.15ರಂದು ಉಚ್ಚ ನ್ಯಾಯಾಲಯವು ಕಾಯ್ದಿರಿಸಿರುವಾಗ ಎಎಸ್‌ಐ ಸರ್ವೆಗೆ ಕೋರಿ ಮೂಲದಾವೆಯಲ್ಲಿ ವಾದಿಗಳು ಸಲ್ಲಿಸಿದ್ದ ಅರ್ಜಿ ವಿಷಯದಲ್ಲಿ ಅದು ಮುಂದುವರಿಯಬಾರದಿತ್ತು ಮತ್ತು ನಿರ್ಧಾರವನ್ನು ಕೈಗೊಳ್ಳಬಾರದಿತ್ತು. ಈ ನ್ಯಾಯಾಲಯದಲ್ಲಿ ಬಾಕಿಯಿರುವ ಅರ್ಜಿಗಳಲ್ಲಿ ತೀರ್ಪು ನೀಡುವವರೆಗೆ ಕೆಳ ನ್ಯಾಯಾಲಯವು ಕಾಯಬೇಕು. ನ್ಯಾಯಾಂಗ ವಿನೀತತೆ ಮತ್ತು ಶಿಷ್ಟಾಚಾರವು ಇಂತಹ ಶಿಸ್ತನ್ನು ಅಗತ್ಯವಾಗಿಸಿದೆ ಮತ್ತು ಇದನ್ನು ಕೆಳ ನ್ಯಾಯಾಲಯದಿಂದ ನಿರೀಕ್ಷಿಸಲಾಗಿತ್ತು. ಆದರೆ ಅರ್ಥವಾಗದ ಕಾರಣಗಳಿಂದ ಅದು ಈ ಔಚಿತ್ಯವನ್ನು ಪಾಲಿಸಿಲ್ಲ ಎಂದು ಹೇಳಿದರು.
ಕೆಳ ನ್ಯಾಯಾಲಯದ ನ್ಯಾಯಾಧೀಶರು ಈ ಸಂಪ್ರದಾಯದಿಂದ ದೂರ ಸರಿದಿದ್ದರು ಮತ್ತು ಸ್ವಯಂ ವಿಚಾರಣೆ ನಡೆಸಲು ಆಯ್ಕೆ ಮಾಡಿಕೊಂಡಿದ್ದರು ಎಂದು ವಿಷಾದಿಸಿದ ನ್ಯಾ.ಪಾಡಿಯಾ,ನ್ಯಾಯಾಂಗ ಉತ್ಸಾಹವು ಕೆಳ ನ್ಯಾಯಾಲಯದಿಂದ ನಿರೀಕ್ಷಿಸಲಾಗಿರುವ ಅಗಾಧ ಹೊಣೆಗಾರಿಕೆಯನ್ನು ಮರೆತುಬಿಡಬಾರದು ಎಂಬ ಆಶಯದಿಂದ ತಾನು ಈ ಮಾತನ್ನು ಹೇಳಿದ್ದೇನೆ ಎಂದರು.
ಉತ್ತರ ಪ್ರದೇಶ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿ ಅಂಜುಮನ್ ಇಂತೆಜಾಮಿಯಾ ಮಸ್ಜಿದ್ ಸಲ್ಲಿಸಿದ್ದ ತಿದ್ದುಪಡಿ ಅರ್ಜಿಗಳನ್ನು ಅನುಮತಿಸಿದ ಉಚ್ಚ ನ್ಯಾಯಾಲಯವು ಮೂರು ದಿನಗಳಲ್ಲಿ ಅರ್ಜಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಅವರ ವಕೀಲರಿಗೆ ಸೂಚಿಸಿತು.
ತಜ್ಞರು ಮತ್ತು ಪುರಾತತ್ವ ವಿಜ್ಞಾನವನ್ನು ಚೆನ್ನಾಗಿ ಬಲ್ಲ ಐವರು ಸದಸ್ಯರ ಸಮಿತಿಯನ್ನು ರಚಿಸುವಂತೆ ಮತ್ತು ಈ ಪೈಕಿ ಇಬ್ಬರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂದು ಎಪ್ರಿಲ್‌ನಲ್ಲಿ ಎಎಸ್‌ಐಗೆ ಆದೇಶಿಸಿದ್ದ ಕೆಳ ನ್ಯಾಯಾಲಯದ ನ್ಯಾಯಾಧೀಶ ಅಶುತೋಷ ತಿವಾರಿ ಅವರು , ಈ ಸಮಿತಿಯು ವಿವಾದಿತ ಸ್ಥಳದಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೆ ಮುನ್ನ ಯಾವುದಾದರೂ ದೇವಸ್ಥಾನವಿತ್ತೇ ಮತ್ತು ಯಾವುದೇ ಇತರ ಧಾರ್ಮಿಕ ಕಟ್ಟಡವನ್ನು ಅತಿಕ್ರಮಿಸಿ ಅದರ ಮೇಲೆ ಅಥವಾ ಅದರಲ್ಲಿ ಮಾರ್ಪಾಡುಗಳನ್ನು ಅಥವಾ ಸೇರ್ಪಡೆಗಳನ್ನು ಮಾಡಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎನ್ನುವುದನ್ನು ಕಂಡು ಹಿಡಿಯುವಂತೆ ನಿರ್ದೇಶ ನೀಡಿದ್ದರು.
ಜ್ಞಾನವಾಪಿ ಮಸೀದಿ ಇರುವ ಜಾಗವನ್ನು ಹಿಂದುಗಳಿಗೆ ಮರಳಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು. ಮುಘಲ್ ಚಕ್ರವರ್ತಿ ಔರಂಗಝೇಬ್ ಮಸೀದಿಯನ್ನು ನಿರ್ಮಿಸಲು ಹಳೆಯ ಕಾಶಿ ವಿಶ್ವನಾಥ ದೇವಸ್ಥಾನದ ಭಾಗಗಳನ್ನು ನೆಲಸಮಗೊಳಿಸಿದ್ದ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಜ್ಞಾನವಾಪಿ ಮಸೀದಿಯ ಆಡಳಿತ ಸಮಿತಿ ಮತ್ತು ಉ.ಪ್ರ.ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸ್ಥಳೀಯ ನ್ಯಾಯಾಲಯದ ಕಲಾಪಗಳನ್ನು ನಿರ್ಬಂಧಿಸುವಂತೆ ಕೋರಿ ಅಲಹಾಬಾದ್ ಉಚ್ಚ ನ್ಯಾಯಾ ಲಯದ ಮೆಟ್ಟಿಲುಗಳನ್ನೇರಿದ್ದವು.
ಕೆಳ ನ್ಯಾಯಾಲಯದ ನಿರ್ಧಾರವು ಅನಗತ್ಯವಾಗಿತ್ತು ಎಂದು ಬಣ್ಣಿಸಿದ್ದ ಅವು,1991ರ ಆರಾಧನಾ ಸ್ಥಳಗಳ(ವಿಶೇಷ ನಿಬಂಧನೆಗಳು) ಕಾಯ್ದೆಯು ಇಂತಹ ಕ್ರಮವನ್ನು ನಿಷೇಧಿಸಿದೆ ಎಂದು ವಾದಿಸಿದ್ದವು. ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಅಯೋಧ್ಯೆ ತೀರ್ಪಿನಲ್ಲಿ ಈ ಕಾಯ್ದೆಯನ್ನು ಅನುಮೋದಿಸಿತ್ತು.







