‘ಬ್ರಿಕ್ಸ್’ ಇನ್ನಷ್ಟು ಫಲದಾಯಕವಾಗುವ ಅಗತ್ಯವಿದೆ : ಪ್ರಧಾನಿ ಮೋದಿ

ಮಾಸ್ಕೋ, ಸೆ.9: ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಸುಧಾರಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿ ‘ಬ್ರಿಕ್ಸ್’ ಸಾಮೂಹಿಕ ನಿಲುವು ತಳೆದಿದೆ. ಮುಂದಿನ 15 ವರ್ಷದಲ್ಲಿ ‘ಬ್ರಿಕ್ಸ್’ ಇನ್ನಷ್ಟು ಫಲದಾಯಕವಾಗುವುದನ್ನು ಖಾತರಿಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವರ್ಚುವಲ್ ವೇದಿಕೆಯ ಮೂಲಕ ನಡೆದ 5 ರಾಷ್ಟ್ರಗಳ ‘ಬ್ರಿಕ್ಸ್’ ಗುಂಪಿನ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಯೋತ್ಪಾದನೆಯ ವಿರುದ್ಧದ ಕ್ರಿಯಾಯೋಜನೆಯನ್ನು ಬ್ರಿಕ್ಸ್ ಅಂಗೀಕರಿಸಿದೆ ಎಂದವರು ಈ ಸಂದರ್ಭ ಹೇಳಿದರು.
ವಿಶ್ವದ 5 ಬೃಹತ್ ಅಭಿವೃದ್ಧಿಶೀಲ ದೇಶಗಳಾದ ಬ್ರೆಝಿಲ್-ರಶ್ಯ-ಭಾರತ-ಚೀನಾ-ದಕ್ಷಿಣ ಆಫ್ರಿಕಾ ದೇಶಗಳ ಸಹಕಾರ ಗುಂಪಿಗೆ ‘ಬ್ರಿಕ್ಸ್’ ಎಂದು ಹೆಸರಿಸಲಾಗಿದೆ. ಜಾಗತಿಕ ಜನಸಂಖ್ಯೆಯ ಶೇ.41, ಜಾಗತಿಕ ಜಿಡಿಪಿಯ 24% ಮತ್ತು ಜಾಗತಿಕ ವ್ಯವಹಾರದ ಶೇ.16 ಪಾಲನ್ನು ‘ಬ್ರಿಕ್ಸ್’ ದೇಶಗಳು ಹೊಂದಿವೆ. ಬ್ರಿಕ್ಸ್ ಗುಂಪಿನ ಅಧ್ಯಕ್ಷನಾಗಿರುವ ಭಾರತ ಈ ಶೃಂಗಸಭೆಯನ್ನು ಆಯೋಜಿಸಿದೆ. “ಬ್ರಿಕ್ಸ್‌ನ 15ನೇ ವಾರ್ಷಿಕೋತ್ಸವದ ಸಂದರ್ಭ ಅದರ ನಾಯಕತ್ವ ವಹಿಸುವ ಅವಕಾಶ ಸಿಕ್ಕಿರುವುದು ತನಗೆ ಹಾಗೂ ದೇಶಕ್ಕೆ ಸಂತಸದ ವಿಷಯವಾಗಿದೆ. ಭಾರತಕ್ಕೆ ಇತರ ಸದಸ್ಯ ದೇಶಗಳ ಪೂರ್ಣ ಸಹಕಾರ ಸಿಕ್ಕಿದೆ. ಕಳೆದ ಒಂದೂವರೆ ದಶಕದಲ್ಲಿ ಬ್ರಿಕ್ಸ್ ಹಲವು ಸಾಧನೆಗಳನ್ನು ಮಾಡಿದ್ದು ಈಗ ವಿಶ್ವದಲ್ಲಿ ಅಭಿವೃದ್ಧಿ ಹೊಂದುವ ಅರ್ಥವ್ಯವಸ್ಥೆಯ ಪ್ರಭಾವೀ ಧ್ವನಿಯಾಗಿ ರೂಪುಗೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಮತ್ತು ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕರೆ: ‘ಹೊಸದಿಲ್ಲಿ ಘೋಷಣೆ’ಅಂಗೀಕರಿಸಿದ ಬ್ರಿಕ್ಸ್ ನಾಯಕರು
ಹೊಸದಿಲ್ಲಿ,ಸೆ.9: 13ನೇ ಬ್ರಿಕ್ಸ್ (ಬ್ರೆಝಿಲ್,ರಷ್ಯಾ,ಭಾರತ,ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯು ಗುರುವಾರ ಸಮಾರೋಪಗೊಂಡಿದ್ದು, ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲು ಕರೆ ನೀಡಿರುವ ‘ಹೊಸದಿಲ್ಲಿ ಘೋಷಣೆ ’ಯನ್ನು ನಾಯಕರು ಅಂಗೀಕರಿಸಿದರು. ಘೋಷಣೆಯು ಕಳೆದ ತಿಂಗಳು ಕಾಬೂಲಿನ ಹಮೀದ್ ಕರ್ಝಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾರೀ ಸಂಖ್ಯೆಯಲ್ಲಿ ಸಾವುನೋವುಗಳಿಗೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಗಳನ್ನೂ ಖಂಡಿಸಿದೆ.
‘ಅಫ್ಘಾನಿಸ್ತಾನದಲ್ಲಿಯ ಇತ್ತೀಚಿನ ಬೆಳವಣಿಗೆಗಳನ್ನು ನಾವು ಕಳವಳದಿಂದ ಗಮನಿಸುತ್ತಿದ್ದೇವೆ. ಹಿಂಸೆಯಿಂದ ದೂರವಿರಲು ಮತ್ತು ಶಾಂತಿಯುತ ವಿಧಾನಗಳ ಮೂಲಕ ಪರಿಸ್ಥಿತಿಯನ್ನು ಬಗೆಹರಿಸಲು ನಾವು ಕರೆ ನೀಡುತ್ತಿದ್ದೇವೆ. ದೇಶದಲ್ಲಿ ಸ್ಥಿರತೆ,ನಾಗರಿಕ ಶಾಂತಿ,ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಲು ಎಲ್ಲರನ್ನೂ ಒಳಗೊಂಡ ಅಂತರ್-ಅಫ್ಘಾನ್ ಸಂವಾದವನ್ನು ಉತ್ತೇಜಿಸಲು ಕೊಡುಗೆಯ ಅಗತ್ಯಕ್ಕೆ ನಾವು ಒತ್ತು ನೀಡುತ್ತಿದ್ದೇವೆ ’ಎಂದು ಘೋಷಣೆಯಲ್ಲಿ ಹೇಳಲಾಗಿದೆ.
ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರದ ಅನುಷ್ಠಾನಕ್ಕಾಗಿ ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕ್ರಿಯಾ ಯೋಜನೆಯ ಅಳವಡಿಕೆಯನ್ನು ಹೊಸದಿಲ್ಲಿ ಘೋಷಣೆಯು ಸ್ವಾಗತಿಸಿದೆ.
ವರ್ಚುವಲ್ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಫ್ಘಾನಿಸ್ತಾನದಲ್ಲಿಯ ಪರಿಸ್ಥಿತಿಯನ್ನು ಪ್ರಮುಖವಾಗಿ ಬಿಂಬಿಸಿ,ಆ ದೇಶವು ನೆರೆಯ ದೇಶಗಳಿಗೆ ಬೆದರಿಕೆ ಹಾಗೂ ಮಾದಕದ್ರವ್ಯ ಕಳ್ಳಸಾಗಣೆ ಮತ್ತು ಭಯೋತ್ಪಾದನೆಯ ಮೂಲವಾಗಬಾರದು ಎಂದು ಹೇಳಿದರು.







