ಕೋವಿಡ್ ಪ್ರಕರಣ: ದೇಶದಲ್ಲಿ ಶೇ. 14 ಏರಿಕೆ ದಾಖಲು
ಹೊಸದಿಲ್ಲಿ, ಸೆ. 9 : ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನ 43.263 ಪ್ರಕರಣಗಳು ದಾಖಲಾಗುವ ಮೂಲಕ ಗುರುವಾರ ದೇಶದಲ್ಲಿ ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ಶೇ. 14ರಷ್ಟು ಏರಿಕೆಯಾಗಿದೆ. ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆಯಾಗುತ್ತಿರುವುದು ಇದು ಎರಡನೇ ದಿನ. ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಬುಧವಾರ 37,875 ದಾಖಲಾಗಿತ್ತು.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 338 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 4,41,749ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ದತ್ತಾಂಶ ಗುರುವಾರ ತಿಳಿಸಿದೆ. ಭಾರತದಲ್ಲಿ ಬುಧವಾರ 369 ಮಂದಿ ಸಾವನ್ನಪ್ಪಿದ್ದಾರೆ. ಅಂದರೆ, ಶೇ. 1.33.ರಷ್ಟು ಸಾವಿನ ಪ್ರಮಾಣ ದಾಖಲಾಗಿದೆ. ಇದೇ ಸಂದರ್ಭ ಕಳೆದ 24 ಗಂಟೆಗಳಲ್ಲಿ ಒಟ್ಟು 40,567 ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ.
ಇದರೊಂದಿಗೆ ಕೋವಿಡ್ ಸೋಂಕಿನಿಂದ ಗುಣಮಖರಾದವರ ಒಟ್ಟು ಸಂಖ್ಯೆ 3,23,04,618 ಆಗಿದೆ. ದತ್ತಾಂಶದ ಪ್ರಕಾರ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 97.48. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,93,614ಕ್ಕೆ ಏರಿಕೆಯಾಗಿದೆ. ಇದು ದೇಶದ ದೇಶದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಶೇ. 1.19. ಒಟ್ಟು ಪ್ರಕರಣಗಳಲ್ಲಿ ಗುರುವಾರ ಕೇರಳದಲ್ಲಿ 30,196, ಮಹಾರಾಷ್ಟ್ರದಲ್ಲಿ 4,117, ತಮಿಳುನಾಡಿನಲ್ಲಿ 1,587 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.







