ಯುಎಪಿಎ ಅನ್ವಯ ತನಿಖೆ ಪೂರ್ಣಗೊಳಿಸಲು ಸಮಯ ವಿಸ್ತರಣೆ ಮಾಡುವ ಅಧಿಕಾರ ಮ್ಯಾಜಿಸ್ಟ್ರೇಟರುಗಳಿಗಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ದಾಖಲಾದ ಪ್ರಕರಣಗಳಲ್ಲಿ ತನಿಖೆಗೆ ನೀಡಲಾದ ಸಮಯಾವಕಾಶವನ್ನು ವಿಸ್ತರಿಸುವ ಅಧಿಕಾರ ಈ ಕಾಯಿದೆಯ ಸಂಬಂಧಿತ ನಿಬಂಧನೆಗಳನ್ವಯ ಮ್ಯಾಜಿಸ್ಟ್ರೇಟರುಗಳಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನಿಖೆಗೆ ಸಮಯಾವಕಾಶವನ್ನು ವಿಸ್ತರಿಸುವ ಅಧಿಕಾರ ಕಾಯಿದೆಯ ಸೆಕ್ಷನ್ 43-ಡಿ (2)(ಬಿ) ಅನ್ವಯ ನಿರ್ದಿಷ್ಟ ಪಡಿಸಿದ ನ್ಯಾಯಾಲಯ ಮಾತ್ರ ಅಧಿಕಾರ ಹೊಂದಿದೆ ಎಂದು ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಎಸ್ ರವೀಂದ್ರ ಭಟ್ ಹಾಗೂ ಬೇಲಂ ಎಂ ತ್ರಿವೇದಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ. ಈ ಕಾಯಿದೆಯನ್ವಯ ನಿರ್ದಿಷ್ಟಪಡಿಸಲಾದ ನ್ಯಾಯಾಲಯಗಳೆಂದರೆ ಎನ್‍ಐಎ ಕಾಯಿದೆಯನ್ವಯ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳಾಗಿವೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ತಾನು ಆರೋಪಿಯಾಗಿರುವ ಪ್ರಕರಣದಲ್ಲಿ ತನಿಖಾ ಏಜನ್ಸಿಗೆ ತನಿಖೆ ಮುಗಿಸಲು ಇನ್ನೂ 180 ದಿನಗಳ ಕಾಲಾವಾಕಾಶ ವಿಸ್ತರಿಸಿದ ಭೋಪಾಲ್ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕ್ರಮವನ್ನು ಪ್ರಶ್ನಿಸಿ ಮಧ್ಯ ಪ್ರದೇಶದ ಸಾದಿಖ್ ಎಂಬಾತ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಪೀಲಿನ ವಿಚಾರಣೆಯನ್ನು ನಡೆಸಿದ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.
ತನಿಖಾ ಏಜನ್ಸಿ ನಿರ್ದಿಷ್ಟ ಪಡಿಸಿದ 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸದೇ ಇರುವುದರಿಂದ ತನಗೆ ಜಾಮೀನು ನೀಡುವಂತೆ ಮಾಡಿದ ಮನವಿಯನ್ನೂ ಭೋಪಾಲ್ ನ್ಯಾಯಾಲಯ ಪುರಸ್ಕರಿಸಿಲ್ಲ ಎಂದು ಅಪೀಲಿನಲ್ಲಿ ಹೇಳಲಾಗಿದೆ.







