ಪಶ್ಚಿಮ ಬಂಗಾಳದ 61 ಬಿಜೆಪಿ ಶಾಸಕರಿಗೆ ಕೇಂದ್ರೀಯ ಭದ್ರತೆ ವಾಪಸ್ ಪಡೆದ ಗೃಹ ಸಚಿವಾಲಯ

ಹೊಸದಿಲ್ಲಿ: ಪಶ್ಚಿಮ ಬಂಗಾಳದ 61 ಬಿಜೆಪಿ ಶಾಸಕರಿಗೆ ಒದಗಿಸಲಾಗಿದ್ದ ಕೇಂದ್ರೀಯ ಭದ್ರತೆಯನ್ನು ವಾಪಸ್ ಪಡೆಯಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಈ ಕುರಿತು ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವಾಲಯ ಈಗಾಗಲೇ ಬಂಗಾಳ ಸರಕಾರಕ್ಕೆ ಮಾಹಿತಿ ನೀಡಿದೆ.
ಇದೀಗ ರಾಜ್ಯದ 71 ಬಿಜೆಪಿ ಶಾಸಕರ ಪೈಕಿ ಈ 61 ಮಂದಿಗೆ ಭದ್ರತೆ ಒದಗಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಈ ಶಾಸಕರು ಬಿಜೆಪಿಗೆ ಸೇರಿದವರೆಂಬ ಒಂದೇ ಕಾರಣಕ್ಕೆ ಈ ಹಿಂದೆ ಕೇಂದ್ರೀಯ ಭದ್ರತೆ ಒದಗಿಸಲಾಗಿತ್ತೇ ವಿನಃ ಅವರಿಗೆ ಅಪಾಯವಿತ್ತು ಎಂಬ ಕಾರಣಕ್ಕೆ ನೀಡಲಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಆದರೆ ವಿಪಕ್ಷ ನಾಯಕ ಹಾಗೂ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಅವರಿಗೆ ಕೇಂದ್ರೀಯ ಭದ್ರತೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ. ಅವರು ಈ ಹಿಂದೆ ರಾಜ್ಯ ಸರಕಾರದಿಂದ ಭದ್ರತೆ ನಿರಾಕರಿಸಿದ್ದರು.
ಈ ನಡುವೆ ಬಿಜೆಪಿಯ ಕೆಲ ನೂತನ ಶಾಸಕರಿಗೆ ತಮ್ಮ ಸುತ್ತ ಸದಾ ಬಂದೂಕು ಹಿಡಿದುಕೊಂಡು ಇರುವ ಭದ್ರತಾ ಸಿಬ್ಬಂದಿ ಇರುವುದರಿಂದ ಅದರಿಂದ ಕಿರಿಕಿರಿ ಸೃಷ್ಟಿಯಾಗಿತ್ತೆಂದೂ ಹೇಳಲಾಗಿದೆ.
ಚುನಾವಣೆ ನಡೆದು ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ ನಾಲ್ಕು ಮಂದಿ ಬಿಜೆಪಿ ಶಾಸಕರು ಮರಳಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಸೋಮವಾರವಷ್ಟೇ ತೃಣಮೂಲದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿಕೆ ನೀಡಿ ಕನಿಷ್ಠ 25 ಬಿಜೆಪಿ ಶಾಸಕರು ತೃಣಮೂಲಕ್ಕೆ ಬರಲು ಇಚ್ಛಿಸುತ್ತಿದ್ದಾರೆಂದು ಹೇಳಿದ್ದರು.
ತೃಣಮೂಲದಿಂದ ಬಂದ ವಲಸಿಗರಿಗೆ ಕೇಂದ್ರೀಯ ಭದ್ರತೆ ಒದಗಿಸುವ ಹೊರೆಯನ್ನು ಹೊತ್ತುಕೊಳ್ಳುವುದು ಬೇಕಿಲ್ಲ ಎಂದು ಕೇಂದ್ರ ಬಿಜೆಪಿ ನಾಯಕತ್ವ ನಿರ್ಧರಿಸಿರುವ ಸಾಧ್ಯತೆಯಿದೆ.







