ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು - ಇಂಡ್‍ವೆಲ್ ಆಟೊಮೇಷನ್ ನಡುವೆ ಒಪ್ಪಂದ

ಮಂಗಳೂರು : ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಸುಧಾರಿತ ಕೈಗಾರಿಕಾ ಆಟೊಮೇಷನ್ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿ ನೀಡುವ ಸಲುವಾಗಿ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆಇಸಿ) ಇಂಡ್‍ವೆಲ್ ಆಟೊಮೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತು. ಈ ಒಪ್ಪಂದವು ಕಾಲೇಜಿನಲ್ಲಿನ ತಾಂತ್ರಿಕ ಅಂತರವನ್ನು ನಿವಾರಿಸಲು, ತಾಂತ್ರಿಕ ಸಾಮರ್ಥ್ಯ ವೃದ್ಧಿಸಲು, ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸಂಶೋಧನಾ ದೃಷ್ಟಿಕೋನದಿಂದ ಉನ್ನತ ವ್ಯಾಸಂಗ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ.
ಈ ಒಪ್ಪಂದಕ್ಕೆ ಉಭಯ ಸಂಸ್ಥೆಗಳ ನಿರ್ದೇಶಕರುಗಳಾದ ವಂ ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜಾ ಮತ್ತು ಶ್ರೀ ಹಿಮಾಂಶು ಕುಮಾರ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ವಂ ಅಲ್ವಿನ್ ಡಿ'ಸೋಜ, ಪ್ರಾಂಶುಪಾಲರಾದ ಡಾ ರಿಯೋ ಡಿ'ಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ ಪುರುಷೋತ್ತಮ ಚಿಪ್ಪಾರ್, ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಡಾ ಸುಧೀರ್ ಎಂ ಮತ್ತು ಕಾಲೇಜಿನ ಸಹಕಾರ ಅಧಿಕಾರಿ ಡಯಾನಾ ಮೊಂತೆರೋ ಅವರು ಉಪಸ್ಥಿತರಿದ್ದರು.
ಈ ಒಪ್ಪಂದದ ಮುಖ್ಯ ಉದ್ದೇಶವು ಕಾಲೇಜು ಕ್ಯಾಂಪಸ್‍ನಲ್ಲಿ ಸುಧಾರಿತ ಕೈಗಾರಿಕಾ ಆಟೊಮೇಷನ್ ತಂತ್ರಜ್ಞಾನಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುವ ತರಬೇತಿಗಾಗಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸುವುದು ಆಗಿದೆ.
ಈ ತರಬೇತಿಯು ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಇಂಡ್‍ವೆಲ್ ಆಟೊಮೇಷನ್ ಜೊತೆಗಿನ ಒಪ್ಪಂದವು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವುದರ ಜೊತೆಗೆ ನೈಜ-ಸಮಯದ ಸವಾಲುಗಳನ್ನು ಎದುರಿಸುವಲ್ಲಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಅವರು ತಿಳಿಸಿದ್ದಾರೆ.







