ಹಿಂದೂ ಯುವತಿಯರನ್ನು ಬಲೆಗೆ ಬೀಳಿಸುವವರೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದೇವೆ: ಗುಜರಾತ್ ಸಿಎಂ

ಅಹ್ಮದಾಬಾದ್: ಹಿಂದೂ ಯುವತಿಯರನ್ನು ಬೆಲೆಗೆ ಬೀಳಿಸುವ ಮತ್ತು ಅವರೊಂದಿಗೆ ಓಡಿಹೋಗುವವರೊಂದಿಗೆ ತಮ್ಮ ಸರಕಾರವು ಕಠಿಣವಾಗಿ ವ್ಯವಹರಿಸುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿಕೆ ನೀಡಿದ್ದಾರೆ. ಅಹಮದಾಬಾದ್‌ನ ವಸಿಹನೋದೇವಿ ಸರ್ಕಲ್ ಪ್ರದೇಶದಲ್ಲಿ ಜಾನುವಾರುಗಳನ್ನು ಸಾಕುವ ಮಾಲ್ಧಾರಿ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೂಪಾನಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಗೋಹತ್ಯೆಯಲ್ಲಿ ತೊಡಗಿರುವವರ ವಿರುದ್ಧವೂ ಕಠಿಣವಾಗಿ ವರ್ತಿಸಿದೆ ಎಂದು ಹೇಳಿದ್ದಾರೆ.
"ಗೋಹತ್ಯೆಯಿಂದ ಹಸುಗಳನ್ನು ರಕ್ಷಿಸುವ ಕಾನೂನಾಗಲಿ, ಭೂ ಕಬಳಿಕೆಯನ್ನು ನಿಲ್ಲಿಸುವ ಕಾನೂನನ್ನಾಗಲಿ ಅಥವಾ ಸರಗಳ್ಳರನ್ನು ಶಿಕ್ಷಿಸುವ ಕಾನೂನು ಸೇರಿದಂತೆ ನಮ್ಮ ಸರ್ಕಾರವು ಕಠಿಣ ನಿಯಮಗಳೊಂದಿಗೆ ಹಲವಾರು ಕಾನೂನುಗಳನ್ನು ತಂದಿದೆ."ನಾವು ಲವ್ ಜಿಹಾದ್ ಅನ್ನು ನಿಲ್ಲಿಸಲು ಕಾನೂನನ್ನು ತಂದಿದ್ದೇವೆ. ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸುವ ಮತ್ತು ಅವರೊಂದಿಗೆ ಪರಾರಿಯಾಗುವವರೊಂದಿಗೆ ನಾವು ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ರಾಯ್ಕಾ ಎಜುಕೇಶನ್ ಚಾರಿಟಬಲ್ ಟ್ರಸ್ಟ್‌ನ ಯೋಜಿತ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮುಖ್ಯಮಂತ್ರಿ ಮಾತನಾಡುತ್ತಿದ್ದರು.





