ಕರ್ನಲ್: ರೈತರ ಬಿಕ್ಕಟ್ಟು ಅಂತ್ಯ ಸಂಭವ

ಫೈಲ್ ಫೋಟೋ (source: PTI)
ಕರ್ನಲ್, ಸೆ.11: ಪ್ರತಿಭಟನಾನಿರತ ರೈತರ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಸಂಬಂಧ ಕರ್ನಲ್ ಜಿಲ್ಲಾಡಳಿತದ ಜತೆ ’ಧನಾತ್ಮಕ’ ಮಾತುಕತೆ ಬಳಿಕ ರೈತರು ಹಾಗೂ ಪೊಲೀಸರ ನಡುವೆ ಮುಂದುವರಿದಿರುವ ಬಿಕ್ಕಟ್ಟು ಶನಿವಾರ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಿಸಿದೆ.
ಆದರೆ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕೃಷಿ ಕಾಯ್ದೆಯ ವಿರುದ್ಧ ಕಳೆದ ನವೆಂಬರ್ನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಸಂಘಟನೆಯ ಮುಖಂಡರು ಅಥವಾ ಸರ್ಕಾರಿ ಪ್ರತಿನಿಧಿಗಳು ನಾಲ್ಕು ಗಂಟೆಗೂ ಅಧಿಕ ಕಾಲ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ.
ಆದರೆ ಆಗಸ್ಟ್ 28ರಂದು ನಡೆದ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗಿದ್ದು, ಶನಿವಾರ ನಡೆಯುವ ಮೂರನೇ ಸುತ್ತಿನ ಮಾತುಕತೆಗೆ ಎರಡು ಅಥವಾ ಮೂರು ವಿಷಯಗಳಷ್ಟೇ ಬಾಕಿ ಇವೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
ಮಾತುಕತೆಗಳು ತೀರಾ ಧನಾತ್ಮಕವಾಗಿದ್ದು, ಉಳಿದ ಕೆಲ ವಿಷಯಗಳನ್ನು ಶನಿವಾರ ನಡೆಯುವ ಮುಂದಿನ ಸುತ್ತಿನ ಮಾತುಕತೆಯಲ್ಲಿ ಬಗೆಹರಿಸಲಾಗುವುದು ಎಂಬ ವಿಶ್ವಾಸವನ್ನು ರೈತ ಮುಖಂಡ ಗುರ್ನಮ್ ಸಿಂಗ್ ಚರೂನಿ ಹೇಳಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹರ್ಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್ ಅವರೂ ರೈತರ ಜತೆಗಿನ ಮಾತುಕತೆ ಧನಾತ್ಮಕವಾಗಿದ್ದು, ವಾರಾಂತ್ಯದಲ್ಲಿ ನಡೆಯುವ ಇನ್ನೊಂದು ಸಭೇಯಲ್ಲಿ ಬಿಕ್ಕಟ್ಟು ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 28ರಂದು ಬಿಜೆಪಿ ಸಭೆ ನಡೆಯುವ ವೇಳೆ ಪ್ರತಿಭಟನೆ ನಡೆಸಲು ಕರ್ನಲ್ಗೆ ಆಗಮಿಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಸೆಪ್ಟೆಂಬರ್ 7ರಿಂದ ರೈತರು ಕರ್ನಲ್ ಮಿನಿ ಸೆಕ್ರೇಟ್ರಿಯೇಟ್ನ ಮುಖ್ಯದ್ವಾರದ ಮುಂದೆ ಧರಣಿ ನಡೆಸುತ್ತಿದ್ದಾರೆ. ಆಗಸ್ಟ್ 28ರ ಘಟನೆಯಲ್ಲಿ 10ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದರು.







