ರಾಜ್ಯ ಸರ್ಕಾರದ ಮಂತ್ರಿಗಳು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ : ಕಾಂಗ್ರೆಸ್ ಟೀಕೆ
''ಮುಖ್ಯಮಂತ್ರಿ ಬದಲಾದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ''

ಬೆಂಗಳೂರು, ಸೆ. 11: 'ಭ್ರಷ್ಟಾಚಾರದ ಸೋಂಕು ತಗುಲಿಸಿಕೊಂಡ ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಗಳು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ, ಸಿಎಂ ಮೌನವು ಅದಕ್ಕೆ ಸಮ್ಮತಿಯ ಲಕ್ಷಣದಂತಿದೆ' ಎಂದು ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕೃಷಿ ಸಚಿವರ ಕೃಷಿ ಉಪಕರಣ ಖರೀದಿಯ ಕಿಕ್ ಬ್ಯಾಕ್ ಹಗರಣದ ಬಗ್ಗೆ ಇದುವರೆಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಿಲ್ಲ. ಮೊಟ್ಟೆ, ಸ್ವೆಟರ್ ಹಗರಣಗಳ ತನಿಖೆಯೂ ಇಲ್ಲ' ಎಂದು ಆರೋಪಿಸಿದೆ.
`ನಾಯಕತ್ವ ಬದಲಾದರೂ, ಸಿಎಂ ಬದಲಾದರೂ ಕರ್ನಾಟಕದೆಡೆಗಿನ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ಮಾತ್ರ ಬದಲಾಗದು. ನೂತನ ಸಿಎಂ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ಹೊಸದಿಲ್ಲಿಗೆ ಹೋಗಿಬಂದರೂ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲದಾಗಿದೆ. ಜಿಎಸ್‍ಟಿ ಬಾಕಿ ಕೊಡಲಿಲ್ಲ, ಲಸಿಕೆ ಕೊರತೆ ನೀಗಲಿಲ್ಲ, ನೆರೆ ಪರಿಹಾರವೂ ಇಲ್ಲ, ನರೇಗಾ ಕೂಲಿ ಬಾಕಿಯೂ ಬರಲಿಲ್ಲ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
`ಯುಪಿಎ ಸರಕಾರದ ಅವಧಿಯಲ್ಲಿ ಫೋರ್ಡ್ ಕಂಪೆನಿ ಗುಜರಾತ್, ಚೆನ್ನೈನಲ್ಲಿ ಉತ್ಪಾದನಾ ಘಟಕ ತೆರೆದಿತ್ತು. ಬಿಜೆಪಿ ಅವಧಿಯಲ್ಲಿ ನಷ್ಟ ಅನುಭವಿಸಿ ತನ್ನ ಎರಡೂ ಘಟಕಗಳನ್ನು ಮುಚ್ಚುತ್ತಿದೆ.
ಮೋದಿ ಅವರ ಆಡಳಿತದಲ್ಲಿ `ಮೇಕ್ ಇನ್ ಇಂಡಿಯಾ' ಬದಲಾಗಿ `ಕ್ವಿಟ್ ಇಂಡಿಯಾ' ಎಂಬಂತಾಗಿದೆ! ದೇಶದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಕಳೆದುಹೋಗಿದೆ' ಎಂದು ವಾಗ್ದಾಳಿ ನಡೆಸಿದೆ.
`ಮೋದಿಯವರ ಜನ್ಮದಿನವನ್ನು ಮೂರು ವಾರಗಳ ಕಾಲ ಸಂಭ್ರಮಾಚರಣೆ ಮಾಡಲು ಬಿಜೆಪಿ ಮುಂದಾಗಿದೆ. ಯಾವ ಸಾಧನೆಗಾಗಿ ಈ ಸಂಭ್ರಮ? ಕಳಪೆ ಕೊರೋನ ನಿರ್ವಹಣೆಯಿಂದ ಜನರನ್ನು ಕೊಂದಿದ್ದಕ್ಕಾ? ಆಕ್ಸಿಜನ್ ನೀಡದೆ ನರಳಿಸಿದ್ದಕ್ಕಾ? ನಿರುದ್ಯೋಗ ಸೃಷ್ಟಿಸಿದ್ದಕ್ಕಾ? ಬೆಲೆ ಏರಿಕೆಯಿಂದ ಜನರನ್ನು ಹಿಂಸಿಸುತ್ತಿರುವುದಕ್ಕಾ? ಆರ್ಥಿಕತೆ ಕುಸಿದಿದ್ದಕ್ಕಾ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
`ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನಿವಾರ್ಯತೆಯನ್ನ ಬಳಸಿಕೊಂಡು ಖಾಸಗಿ ಬಸ್ ಮಾಲಕರು ದುಪ್ಪಟ್ಟು ದರ ವಿಧಿಸಿ ಸುಲಿಗೆ ನಡೆಸಿದ್ದಾರೆ, ಆದರೆ ಸಾರಿಗೆ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಖಾಸಗಿ ಬಸ್‍ಗಳ ಮೇಲೆ ಸರಕಾರಕ್ಕೆ ನಿಯಂತ್ರಣವಿಲ್ಲವೇ ಅಥವಾ ಖಾಸಗಿ ಲಾಭಿಗೆ ಮಣಿದಿದೆಯೇ? ಸರಕಾರ ಕೂಡಲೇ ಕ್ರಮವಹಿಸಿ ಪ್ರಯಾಣಿಕರ ಹಿತ ಕಾಪಾಡಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕೃಷಿ ಸಚಿವರ ಕೃಷಿ ಉಪಕರಣ ಖರೀದಿಯ ಕಿಕ್ ಬ್ಯಾಕ್ ಹಗರಣದ ಬಗ್ಗೆ ಇದುವರೆಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಿಲ್ಲ.
— Karnataka Congress (@INCKarnataka) September 11, 2021
ಮೊಟ್ಟೆ, ಸ್ವೆಟರ್ ಹಗರಣಗಳ ತನಿಖೆಯೂ ಇಲ್ಲ.
ಭ್ರಷ್ಟಾಚಾರದ ಸೋಂಕು ತಗುಲಿಸಿಕೊಂಡ @BJP4Karnataka ಸರ್ಕಾರದ ಮಂತ್ರಿಗಳು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ, ಸಿಎಂ ಮೌನವು ಅದಕ್ಕೆ ಸಮ್ಮತಿಯ ಲಕ್ಷಣದಂತಿದೆ!







