ಅರಣ್ಯ ಇಲಾಖೆಯವರು ಕಾಡಿನ ಗಡಿ ರಕ್ಷಿಸುವ ಸೈನಿಕರು: ಆಶಿಶ್ ರೆಡ್ಡಿ

ಉಡುಪಿ, ಸೆ.11: ಸೈನಿಕರು ನಮ್ಮ ದೇಶದ ಗಡಿಯನ್ನು ರಕ್ಷಣೆ ಮಾಡಿದರೆ, ಕಾಡಿನ ಗಡಿಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡುತ್ತದೆ. ಕಾಡಿನ ಗಡಿಯನ್ನು ಸಂರಕ್ಷಣೆ ಮಾಡದಿದ್ದರೆ ಕಾಡು ಉಳಿಯುವುದಿಲ್ಲ. ಕಾಡು ಉಳಿದಿದ್ದರೆ ನಾಡು ಕೂಡ ಉಳಿಯುವುದಿಲ್ಲ. ಅಂತಹ ಮಹತ್ತರವಾದ ಜವಾಬ್ದಾರಿ ಅರಣ್ಯ ಇಲಾಖೆ ಮೇಲೆ ಇದೆ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಎಂ.ವಿ. ಹೇಳಿದ್ದಾರೆ.
ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಹಾಗೂ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯ ದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಅರಣ್ಯ ಹುತಾತ್ಮರ ಸ್ಮರಣಾರ್ಥ ಶನಿವಾರ ಅಜ್ಜರಕಾಡು ಪುರಭವನದ ಮಿನಿ ಹಾಲ್ ನಲ್ಲಿ ಆಯೋಜಿಸಲಾದ 21ನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಮ್ಮ ದೇಶದ ಜನಸಂಖ್ಯೆ 30ಕೋಟಿ ಇದ್ದರೆ, ಇಂದು 130 ಕೋಟಿ ಅಂದರೆ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಇದರಿಂದ ಕಾಡಿನ ಮೇಲಿನ ಒತ್ತಡ ಕೂಡ ಸಾಕಷ್ಟು ಜಾಸ್ತಿ ಆಗುತ್ತಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಅರಣ್ಯ ಒತ್ತುವರಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಶ್ರಮ ವಹಿಸುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ನಾಗೇಶ್ ಬಿಲ್ಲವ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ, ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಗೌರವಾಧ್ಯಕ್ಷ ಎಚ್.ದೇವರಾಜ ಪಾಣ, ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಉಪಸ್ಥಿತರಿದ್ದರು.
ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಜಿಲ್ಲಾಧ್ಯಕ್ಷ ಕೇಶವ ಪೂಜಾರಿ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಕರುಣಾಕರ ಜೆ. ಆಚಾರ್ಯ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.







