ಕಿಕ್ ಬ್ಯಾಕ್ ಕಾಂಗ್ರೆಸ್ ಸಂಸ್ಕೃತಿ, ನಮ್ಮದು ಕಾಯಕ ಸಂಸ್ಕೃತಿ: ಸಚಿವ ಅಶ್ವತ್ಥನಾರಾಯಣ ಪ್ರತಿಕ್ರಿಯೆ
ಜಿಟಿಟಿಸಿ ಟೆಂಡರ್ʼನಲ್ಲಿ ಅಕ್ರಮ ಆರೋಪ

ಬೆಂಗಳೂರು: ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ)ದ ಟೆಂಡರ್ʼನಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಹಾಗೂ ಎಚ್.ಎಂ.ರೇವಣ್ಣ ಅವರಿಗೆ ಕಾನೂನು ಮೂಲಕವೇ ಉತ್ತರ ನೀಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಈ ಬಗ್ಗೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, “ಇವರಲ್ಲಿ ಒಬ್ಬರು ಮಾಜಿ ಸಚಿವರು, ಇನ್ನೊಬ್ಬರು ಮಾಜಿ ಸಂಸದರು. ಮಾಜಿ ಸಂಸದರು ವಕೀಲರೂ ಹೌದು. ಆದರೂ ಇಷ್ಟು ಬೇಜವಾಬ್ದಾರಿಯಾಗಿ ಆರೋಪ ಮಾಡಿರುವ ಅವರಿಗೆ ಲೀಗಲ್ ನೋಟೀಸ್ ಕೊಡಲಾಗುವುದು” ಎಂದರು.
ಜಿಟಿಟಿಸಿ ಟೆಂಡರ್ ಬಗ್ಗೆ ಇವರು ಸುಳ್ಳಿನಸೌಧವನ್ನೇ ಕಟ್ಟಿದ್ದಾರೆ. ಇದು ರಾಜಕೀಯವಾಗಿ ದೂರುವ, ಗಾಳಿಯಲ್ಲಿ ಗುಂಡು ಹೊಡೆಯುವ ಕೀಳುಮಟ್ಟದ ಆರೋಪವಾಗಿದೆ. ಅಲ್ಲದೆ, ನಮಗೆ ಮಸಿ ಬಳಿಯುವ ದುರುದ್ದೇಶವಷ್ಟೇ. ಉಪಕರಣ ಖರೀದಿಯಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ ಎಂಬುದು ಶುದ್ಧ ಸುಳ್ಳು. ಈ ಆರೋಪ ಮಾಡಿದವರಿಗೆ ಬುದ್ಧಿಭ್ರಮಣೆ ಆಗಿರಬೇಕು. ಎಲ್ಲೂ ಒಂದು ರೂಪಾಯಿ ಅವ್ಯವಹಾರ ನಡೆದಿಲ್ಲ, ನಡೆಯಲು ಸಾಧ್ಯವೂ ಇಲ್ಲ ಎಂದು ಸಚಿವರು ಹೇಳಿದರು.
ಟೆಂಡರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆದಿದೆ. ಎಡಿಎ (Aeronautical Development Agency), ಡಿಆರ್ʼಡಿಒ (Defence Research and Development Organisation) ಹಾಗೂ ಎಂಎಸ್ʼಎಂಇ (Ministry of Micro, Small and Medium Enterprises) ಸಂಸ್ಥೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಟೆಂಡರ್ ತಾಂತ್ರಿಕ ಸಮಿತಿಯ ಸದಸ್ಯರು. ಅವರ ಸಲಹೆ ಮೇಲೆಯೇ ಎಲ್ಲವೂ ನಡೆಯುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಬಹುತೇಕ ಉಪಕರಣಗಳನ್ನು ಕೇಂದ್ರ ಸರಕಾರಿ ಸ್ವಾಮ್ಯದ ಎಚ್ ಎಂಟಿ ಸಂಸ್ಥೆಯಿಂದ ಖರೀದಿ ಮಾಡಲಾಗುತ್ತಿದೆ. ಅದೂ ಟೆಂಡರ್ ಮೂಲಕ ಪಾರದರ್ಶಕ ವಾಗಿ ನಡೆಯುತ್ತದೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಕಿಕ್ʼಬ್ಯಾಕ್ ತೆಗೆದುಕೊಂಡು ಖರೀದಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಿಕ್ʼಬ್ಯಾಕ್, ಫುಲ್ʼಬ್ಯಾಕ್ ಎನ್ನುವುದು ಕಾಂಗ್ರೆಸ್ ನಾಯಕರ ಸಂಸ್ಕೃತಿ. ನಮ್ಮದು ಕಾಯಕ ಸಂಸ್ಕೃತಿ. ಚೆನ್ನಾಗಿ ಕೆಲಸ ಮಾಡುತ್ತಿರುವವರ ಮೇಲೆ ಕೆಸರು ಚೆಲ್ಲುವುದು ಕೂಡ ಅವರ ಹೀನ ರಾಜಕೀಯಕ್ಕೆ ಹಿಡಿದ ಕನ್ನಡಿ ಎಂದು ತರಾಟೆಗೆ ತೆಗೆದುಕೊಂಡರು.
ವೃಥಾ ಯಾರೂ ಆರೋಪ ಮಾಡಬಾರದು. ದಾಖಲೆಗಳನ್ನು ಇಟ್ಟುಕೊಂಡು ದೂರಬೇಕು. ಇಲ್ಲಿ ದಲ್ಲಾಳಿಗಳಿಗೆ ಅವಕಾಶವೇ ಇಲ್ಲ. ಇಲ್ಲಿ ಏನಾದರೂ ಅದು ಪಾರದರ್ಶಕವಾಗಿರುತ್ತದೆ ಎಂದು ಸಚಿವರು ತಿಳಿಸಿದರು.







