ಉ.ಪ್ರ: ಉಸಿರುಗಟ್ಟಿಸಿ ಮಾಜಿ ಸಚಿವನ ಕೊಲೆ, ಪುತ್ರನ ಮಾವನ ವಿರುದ್ಧ ಪ್ರಕರಣ ದಾಖಲು

photo: twitter.com/timesofindia
ಮೀರತ್,ಸೆ.11: ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಬಡೌತ್ ಪಟ್ಟಣದಲ್ಲಿ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆತ್ಮಾರಾಮ ತೋಮರ್ (75) ಅವರನ್ನು ಇಬ್ಬರು ವ್ಯಕ್ತಿಗಳು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ತೋಮರ್ ಅವರ ಹಿರಿಯ ಪುತ್ರ ಸತ್ಯಪ್ರತಾಪ್ ಅವರ ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸತ್ಯಪ್ರತಾಪ್ ಮೀರತ್ನಲ್ಲಿ ವೈದ್ಯರಾಗಿದ್ದಾರೆ. ತನ್ನ ತಂದೆ ಮತ್ತು ಮಾವನ ನಡುವೆ ಹಣಕಾಸು ವಿವಾದವಿತ್ತು,ಇದು ಕೊಲೆಗೆ ಕಾರಣವಾಗಿರಬಹುದು ಎಂದು ಸತ್ಯಪ್ರತಾಪ್ ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
ತೋಮರ್ ಪತ್ನಿಯ ನಿಧನದ ಬಳಿಕ ತನ್ನ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಅವರ ಕಿರಿಯ ಪುತ್ರ ಅಮೆರಿಕದಲ್ಲಿ ವಾಸವಿದ್ದಾನೆ.
ಇಬ್ಬರು ವ್ಯಕ್ತಿಗಳು ತೋಮರ್ ನಿವಾಸವನ್ನು ಪ್ರವೇಶಿಸಿದ್ದನ್ನು ಮತ್ತು ಒಂದು ಗಂಟೆಯ ಬಳಿಕ ನಿರ್ಗಮಿಸಿದ್ದನ್ನು ಪ್ರದೇಶದಲ್ಲಿನ ಸಿಸಿಟಿವಿ ಫೂಟೇಜ್ ತೋರಿಸಿದೆ.
ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗ್ಗೆ ತಾನು ತಂದೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು,ಸಾಧ್ಯವಾಗಿರಲಿಲ್ಲ. ಹೀಗಾಗಿ ತಾನು ಕುಟುಂಬ ಸ್ನೇಹಿತನ್ನು ಅಲ್ಲಿಗೆ ಕಳುಹಿಸಿದ್ದೆ ಮತ್ತು ತಂದೆಯ ಕೋಣೆಗೆ ಹೊರಗಿನಿಂದ ಬೀಗ ಹಾಕಿದ್ದು ಬೆಳಕಿಗೆ ಬಂದಿತ್ತು ಎಂದು ಸತ್ಯಪ್ರತಾಪ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಕೋಣೆಯ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಹಾಸಿಗೆಯ ಮೇಲೆ ತೋಮರ್ ಮೃತದೇಹ ಪತ್ತೆಯಾಗಿತ್ತು. ಅವರ ಕುತ್ತಿಗೆಗೆ ಟವೆಲ್ ಬಿಗಿದು ಉಸಿರುಗಟ್ಟಿಸಿದಂತೆ ಕಂಡು ಬಂದಿದೆ. ಕೋಣೆಯಲ್ಲಿದ್ದ ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದು ಬಾಗಪತ್ ಎಸ್ಪಿ ನೀರಜ ಜದ್ವಾನ್ ಅವರು ಸುದ್ದಿಗಾರರಿಗೆ ತಿಳಿಸಿದರು.







