ತಿಪ್ರುರ ಸಿಪಿಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಉಡುಪಿ, ಸೆ.11: ತ್ರಿಪುರದಲ್ಲಿ ಸಿಪಿಎಂ ರಾಜ್ಯ ಸಮಿತಿ ಕಛೇರಿ ಸೇರಿದಂತೆ ವಿವಿಧ ಕಛೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಸಿಪಿಐಎಂ ಉಡುಪಿ ಹಾಗೂ ಕುಂದಾಪುರ ತಾಲೂಕು ಸಮಿತಿ ನೇತೃತ್ವ ದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ನಡೆದ ಪ್ರತಿಭಟನೆಯನ್ನು ದ್ದೇಶಿಸಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಕೆ.ಶಂಕರ್, ಎಐಎಡಬ್ಲುಯುನ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಕೋಣಿ, ಸಿಪಿಎಂ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ರಾಮ ಕರ್ಕಡ, ಸಮಿತಿ ಸದಸ್ಯ ರಾದ ಕವಿರಾಜ್ ಎಸ್., ನಳಿನಿ, ವಿಶ್ವನಾಥ್ ಕೆ., ಸಿಐಟಿಯು ಮುಖಂಡರಾದ ಶೇಖರ್ ಬಂಗೇರ, ಗಣೇಶ್ ನಾಯ್ಕ, ಸದಾಶಿವ ಪೂಜಾರಿ ಬ್ರಹ್ಮಾವರ, ಸರೋಜ, ಪ್ರಭಾಕರ್ ಕುಂದರ್ ಮೊದಾದವರು ಉಪಸ್ಥಿತರಿದ್ದರು.
ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ, ತ್ರಿಪುರ ರಾಜ್ಯದ ಬಿಜೆಪಿ ಸರಕಾರವು ಬೆಲೆ ಏರಿಕೆ ವಿರುದ್ಧ, ಕೇಂದ್ರದ ನೀತಿಗಳ ವಿರುದ್ಧ ಹೋರಾಟ ಮಾಡುವವರನ್ನು ಬಾಯಿ ಮುಚ್ಚಿಸಲು ತನ್ನ ಕಾರ್ಯಕರ್ತರ ಮೂಲಕ ಹಿಂಸಾಚಾರ ಹರಿಯಬಿಡುತ್ತಿದೆ. ಶಾಂತಿಯುತವಾಗಿ ರಾಜಕೀಯ ಚಟುವಟಿಕೆಗಳನ್ನು ಸಂಘಟಿಸುವ ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕುಗಳನ್ನೇ ಬಿಜೆಪಿ ಸರಕಾರ ತುಳಿದು ಹಾಕುತ್ತಿದೆ. ಕೇಂದ್ರ ಸರಕಾರ ಇಂತಹ ದೊಂಬಿಗಳನ್ನು ನಡೆಸುವವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ, ಮುಖಂಡರಾದ ದಾಸ ಭಂಡಾರಿ, ಮಹಾಬಲ ವಡೇರಹೋಬಳಿ, ಬಲ್ಕೀಸ್, ರವಿ ವಿ.ಎಂ. ಮೊದಲಾದವರು ಉಪಸ್ಥಿತರಿದ್ದರು.







