ಸೆ.13ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ವಿಧಾನಸೌಧಕ್ಕೆ ಮುತ್ತಿಗೆ
ಬೆಂಗಳೂರು, ಸೆ.11: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಕ್ತವಾಗಿ ಚರ್ಚಿಸಿ ಹಿಂಪಡೆಯಬೇಕೆಂದು ಆಗ್ರಹಿಸಿ ನಾಳೆ (ಸೆ.13) ವಿಧಾನಸೌಧಕ್ಕೆ ಮುತ್ತಿಗೆ ಚಳುವಳಿ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ, ಸೋಮವಾರದಿಂದ ಆರಂಭಗೊಳ್ಳಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತುತತೆಯ ಹಲವಾರು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಇದರಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಹ ಮುಕ್ತವಾಗಿ ಚರ್ಚಿಸಿ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಮೂರು ದಶಕಗಳ ನಂತರ ಜಾರಿಗೊಳಿಸಲು ಉದ್ದೇಶಿಸಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಶಿಕ್ಷಕರು ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದರು.
ಆದರೆ, ಈ ನಿರೀಕ್ಷೆಗೆ ತದ್ವಿರುದ್ಧವಾಗಿ ವಾಸ್ತವತೆಯಿಲ್ಲದ ಜನರನ್ನು ಕನಸಿನ ಲೋಕದಲ್ಲಿ ತೇಲಾಡಿಸುವ ಅಸಮರ್ಪಕ ಹಾಗೂ ಅವೈಜ್ಞಾನಿಕವಾದ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ರೀತಿಯಲ್ಲಿ ಕ್ಯಾಬಿನೆಟ್ ಸಭೆ ಕರೆದು ಲೋಕಸಭೆಯಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಚರ್ಚೆಗೆ ಒಳಪಡಿಸದೆ ಹಿಂಬದಿ ಬಾಗಿಲಿನ ಮುಖಾಂತರ ಜಾರಿಗೊಳಿಸಿರುವುದರ ಹಿಂದಿರುವ ದುರುದ್ದೇಶವನ್ನು ನಾವು ಅರಿತಿದ್ದೇವೆ ಎಂದು ನುಡಿದರು.
ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ಹೊಂದಿದೆ ಎಂದ ಅವರು, 2016 ರಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸುಗೊಳಿಸಿದ ಸುಬ್ರಮಣ್ಣಿಯನ್ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ. ಅವರ ವರದಿಯ ಅಭಿಪ್ರಾಯಗಳನ್ನು ಏಕೆ ಪರಿಗಣಿಸಲಿಲ್ಲ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ, ಸವಾದ್ ಕಲ್ಲರ್ಪೆ, ಹುಸೇನ್ ಬಾಶಾ ಕೊಪ್ಪಳ ಸೇರಿದಂತೆ ಪ್ರಮುಖರಿದ್ದರು.







