ಹಣ ಅಕ್ರಮ ವರ್ಗಾವಣೆ ಪ್ರಕರಣ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸಮನ್ಸ್

ಖರ್ಗೋನೆ(ಮಧ್ಯಪ್ರದೇಶ), ಸೆ. 11: ಪಶ್ಚಿಮ ಬಂಗಾಳದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯೊಂದಿಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ವಾಸ್ತವವಾಗಿ ಬ್ಯಾನರ್ಜಿ ಅವರಿಗೆ ದಿಲ್ಲಿಯಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ, ತುರ್ತಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ಮನವಿ ಮಾಡಿಕೊಂಡಿದ್ದರು. ಅದಾಗಲೇ ಅವರನ್ನು ದಿಲ್ಲಿಯ ಜಾಮ್ನಗರದ ಮನೆಯಲ್ಲಿ ಸೆಪ್ಟಂಬರ್ 6ರಂದು 8 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆಯ ಮನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ‘‘ನಾನು ವಿಚಾರಣೆ ಎದುರಿಸಲು ಸಿದ್ಧ. ನಾನು ಸಹಕರಿಸಲಿದ್ದೇನೆ ಎಂದು ಹೇಳಿದ್ದರು. ಆದರೆ, ಕೋಲ್ಕತ್ತಾದಲ್ಲಿನ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಗೆ ಸಮನ್ಸ್ ನೀಡಲಾಗಿದೆ’’ ಎಂದು ಹೇಳಿದ್ದರು.
‘‘ನಾನು ನವೆಂಬರ್ನಲ್ಲಿ ಏನು ಹೇಳಿದ್ದೇನೆಯೋ ಅದನ್ನೇ ಮತ್ತೆ ಉಚ್ಚರಿಸುತ್ತೇನೆ. ನಾನು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದೇನೆ ಎಂದು ಕೇಂದ್ರದ ಯಾವುದೇ ತನಿಖಾ ಸಂಸ್ಥೆ ಸಾಬೀತು ಮಾಡಿದರೆ, ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ ಎಂದು ಅವರು ಘೋಷಿಸಿದ್ದರು.







