ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆ: ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಸಚಿವ ಗೋಪಾಲಯ್ಯ ಮನವಿ

ಬೆಂಗಳೂರು, ಸೆ.11: ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಬಡವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮನವಿ ಮಾಡಿದ್ದಾರೆ.
ಶನಿವಾರ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ತಮ್ಮ ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಅವರು, ನಮ್ಮ ಕ್ಷೇತ್ರದಲ್ಲಿ ವಾಸವಿರುವ ಸುಮಾರು ಜನತೆಗೆ ಮನೆಗಳಿಲ್ಲದನ್ನು ನಾವೆಲ್ಲರೂ ಗಮನಿಸಿದ್ದೇವೆ. ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ ಕಾಂಗ್ರೆಸ್ ಸರಕಾರ ಇದ್ದಾಗ ಕೆಲವರು ಅರ್ಜಿಗಳನ್ನು ಹಾಕಿದ್ದರು ಎಂದರು.
ಬಿಜೆಪಿ ಸರಕಾರ ಬಂದ ನಂತರ ವಸತಿ ಸಚಿವ ವಿ.ಸೋಮಣ್ಣ ಹಳೆ ಅರ್ಜಿಗಳನ್ನು ರದ್ದುಗೊಳಿಸಿ ಹೊಸ ಅರ್ಜಿಗಳನ್ನು ಹಾಕುವಂತೆ ತಿಳಿಸಿದ್ದು, ಬೆಂಗಳೂರಿನ ಎಂಟು ಕ್ಷೇತ್ರಗಳಲ್ಲಿ 27 ಕಡೆ ಎಲ್ಲಿ ಸರಕಾರಿ ಜಾಗ ಲಭ್ಯವಿದೆ, ಅಲ್ಲಲ್ಲಿ ಮೂರು ಲಕ್ಷಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ಶೇ.50ರಷ್ಟು ಮನೆಗಳನ್ನು ನಮ್ಮಂತ ಕ್ಷೇತ್ರಗಳಲ್ಲಿ ಅರ್ಜಿ ಹಾಕುವವರಿಗೆ ನೀಡುವಂತ ಕೆಲಸ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಇದು ಸಚಿವ ಸಂಪುಟದಲ್ಲಿ ಮತ್ತು ಮುಖ್ಯಮಂತ್ರಿ ಜೊತೆಯೂ ಚರ್ಚೆಯಾಗಿದೆ. ನಮ್ಮ ಕ್ಷೇತ್ರದಲ್ಲಿ 40 ರಿಂದ 50 ಜನ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆದ ಕಾರಣ ನಮ್ಮ ಕ್ಷೇತ್ರದಲ್ಲಿ ಯಾರಿಗೆ ಮನೆ ಇಲ್ಲ ಅಂತಹವರು ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಶಾಸಕರ ಕಚೇರಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಜನರಿಗೆ ಮಾಹಿತಿ ನೀಡುವಂತೆ ಮುಖಂಡರಿಗೆ ಗೋಪಾಲಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆಲ ನರೇಂದ್ರ ಬಾಬು, ಮಾಜಿ ಉಪ ಮೇಯರ್ ಹರೀಶ್, ಮಾಜಿ ಪಾಲಿಕೆ ಸದಸ್ಯ ಮಹದೇವ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.







