ಬ್ರಿಟನ್‌ನ ಎಮ್ಮಾ ರಡುಕಾನುಗೆ ಯುಎಸ್ ಓಪನ್ ಕಿರೀಟ

ನ್ಯೂಯಾರ್ಕ್ : ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದಿದ್ದ ಶ್ರೇಯಾಂಕ ರಹಿತ ಆಟಗಾರ್ತಿ ಬ್ರಿಟನ್‌ನ 18 ವರ್ಷದ ಎಮ್ಮಾ ರಡುಕಾನು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದರು. ಇದು ಎಮ್ಮಾ ಅವರ ಎರಡನೇ ಗ್ರ್ಯಾಂಡ್‌ಸ್ಲಾಂ ಟೂರ್ನಿಯಾಗಿತ್ತು.
ಫ್ಲಶಿಂಗ್ ಮೆಡೋಸ್‌ನಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಕೆನಡಾದ ಹದಿಹರೆಯದ ಆಟಗಾರ್ತಿ ಲೇಲಹ್ ಫೆರ್ನಾಂಡಿಸ್ ವಿರುದ್ಧ 6-4, 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಈ ಮೂಲಕ ವೃತ್ತಿಪರ ಟೆನಿಸ್‌ನಲ್ಲಿ ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದು ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎನಿಸಿಕೊಂಡರು.
ವಿಶ್ವ ರ್ಯಾಂಕಿಂಗ್‌ನಲ್ಲಿ 150ನೇ ಸ್ಥಾನದಲ್ಲಿರುವ ಈ ಉದಯೋನ್ಮುಖ ಆಟಗಾರ್ತಿ ನ್ಯೂಯಾರ್ಕ್ ಓಪನ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡಿದ ಆರು ಹಾಗೂ ಮುಖ್ಯ ಡ್ರಾದಲ್ಲಿ ಆಡಿದ 14 ಹೀಗೆ ಎಲ್ಲ 20 ಸೆಟ್‌ಗಳನ್ನೂ ಗೆಲ್ಲುವ ಮೂಲಕ ಚಾಂಪಿಯನ್‌ಶಿಪ್ ಗೆದ್ದ ಕೀರ್ತಿಗೆ ಪಾತ್ರರಾದರು. 2014ರಲ್ಲಿ ಸೆರೇನಾ ವಿಲಿಯಮ್ಸ್ ಮಾತ್ರ ಈ ಸಾಧನೆ ಮಾಡಿದ್ದರು.
ಅಂತೆಯೇ ಹದಿನೇಳು ವರ್ಷದವರಾಗಿದ್ದ ಸೆರೇನಾ ವಿಲಿಯಮ್ಸ್ 1999ರ ಯುಎಸ್ ಓಪನ್‌ನಲ್ಲಿ 18 ವರ್ಷದ ಮಾರ್ಟಿನಾ ಹಿಂಗಿಸ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದ ಬಳಿಕ ಇಬ್ಬರು ಶ್ರೇಯಾಂಕ ರಹಿತ ಹದಿಹರೆಯದ ಆಟಗಾರ್ತಿಯರು ಫೈನಲ್ ತಲುಪಿದ್ದರು.
ಎರಡನೇ ಸೆಟ್‌ನಲ್ಲಿ ಎದುರಾಳಿಯ ಸರ್ವೀಸ್ ಬ್ರೇಕ್ ಮಾಡುವ ಮೂಲಕ 4-2 ಮುನ್ನಡೆ ಸಾಧಿಸಿದ ಎಮ್ಮಾ, ತಮ್ಮ ಪಾಯಿಂಟ್ ಉಳಿಸಿಕೊಂಡು ಮುನ್ನಡೆಯನ್ನು 5-2ಕ್ಕೆ ಹಿಗ್ಗಿಸಿಕೊಂಡರು. ಬಳಿಕ ಮತ್ತೊಮ್ಮೆ ಬ್ರೇಕ್‌ಪಾಯಿಂಟ್ ಮೂಲಕ ಪ್ರಶಸ್ತಿ ಗೆದ್ದರು.