ವಿಜಯ್ ರೂಪಾನಿ ಉತ್ತರಾಧಿಕಾರಿ ಯಾರು ಗೊತ್ತೇ ?

ಹೊಸದಿಲ್ಲಿ: ಗುಜರಾತ್‌ನ ಇಬ್ಬರು ಕೇಂದ್ರ ಸಚಿವರು, ಎರಡು ಕೇಂದ್ರಾಡಳಿತ ಪ್ರದೇಶಗಳ ವಿವಾದಾತ್ಮಕ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್, ರಾಜ್ಯ ಕೃಷಿ ಸಚಿವ ಆರ್‌ಸಿ ಫಲ್ಡು ಅವರು ಗುಜರಾತ್ ಮುಖ್ಯಮಂತ್ರಿ ರೇಸ್‌ನಲ್ಲಿರುವ ಪ್ರಮುಖರು ಎಂದು ಬಿಜೆಪಿ ಮೂಲಗಳು ಹೇಳಿವೆ.
ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈ ದಿಢೀರ್ ನಿರ್ಧಾರ ಹಲವು ಮಂದಿಗೆ ಆಘಾತ ತಂದಿದ್ದರೂ, ಇದು ಯೋಜಿತ ಹಾಗೂ ಕೇಂದ್ರ ನಾಯಕತ್ವದ ಆದೇಶದ ಮೇಲೆ ಕೈಗೊಂಡ ನಿರ್ಧಾರ ಎನ್ನಲಾಗಿದೆ. ಇದಕ್ಕೂ ಮುನ್ನ 2016ರಲ್ಲಿ ಆನಂದಿಬೆನ್ ಪಟೇಲ್ ಅವರ ಅಧಿಕಾರಾವಧಿ ಮುಗಿಯುವ ಹದಿನಾರು ತಿಂಗಳು ಮುನ್ನವೇ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು.
ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ಇದೀಗ 65 ವರ್ಷ ವಯಸ್ಸಿನ ರೂಪಾನಿಯವರ ರಾಜೀನಾಮೆಗೆ ಸೂಚಿಸಲಾಗಿದೆ. ಹೊಸ ನಾಯಕತ್ವದ ಅಡಿಯಲ್ಲಿ ಮತ್ತು ಮೋದಿಯವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ ಬಿಜೆಪಿ ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವ್ ಅವರ ಜತೆಗೆ ಕೇಂದ್ರ ಸಚಿವರಾದ ಮನ್‌ಸುಖ್ ಮಾಂಡವಿಯ ಮತ್ತು ಪುರುಷೋತ್ತಮ್ ರೂಪಾಲಾ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕೇಂದ್ರ ನಾಯಕತ್ವದ ನಿರ್ಧಾರದಂತೆ ಅಧಿಕಾರ ತ್ಯಜಿಸಬೇಕು ಎಂದು ರೂಪಾನಿಗೆ ಸೂಚಿಸಲಾಯಿತು ಎನ್ನಲಾಗಿದೆ.
ಹೊಸ ಮುಖ್ಯಮಂತ್ರಿಯ ಆಯ್ಕೆ ಮುಕ್ತವಾಗಿದ್ದು, ಗುಜರಾತ್‌ನ ಶಾಸಕರಲ್ಲದವರನ್ನೂ ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಲಕ್ಷದ್ವೀಪ ಹಾಗೂ ದಾದ್ರಾ ಮತ್ತು ನಗರ್ ಹವೇಲಿಯ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ರೇಸ್‌ನಲ್ಲಿರುವ ಪ್ರಮುಖರು. ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲಾ, ಆರೋಗ್ಯ ಖಾತೆ ಸಚಿವ ಮನ್‌ಸುಖ್ ಮಾಂಡವಿಯ ಹೆಸರು ಕೂಡಾ ಪರಿಗಣನೆಯಲ್ಲಿದ್ದು, ಇಬ್ಬರೂ ಪಟೇಲ್ ಅಥವಾ ಪಾಟಿದಾರ ಸಮುದಾಯದವರು. ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹಾಗೂ ಕೃಷಿ ಸಚಿವ ಆರ್.ಸಿ.ಫಲ್ದು ಅವರ ಹೆಸರೂ ಕೇಳಿ ಬರುತ್ತಿದೆ.







