ಹುಣಸೋಡು ಸ್ಫೋಟ ಪ್ರಕರಣ: ಮೃತಪಟ್ಟ 6ನೇ ವ್ಯಕ್ತಿಯ ಗುರುತು ಪತ್ತೆ

ಶಿವಮೊಗ್ಗ, ಸೆ.12: ಇಡೀ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರಿ ಸ್ಪೋಟದಲ್ಲಿ ಮೃತಪಟ್ಟಿದ್ದ ಆರನೆ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಪ್ರಕರಣ ಸಂಭವಿಸಿ ಏಳೂವರೆ ತಿಂಗಳ ಬಳಿಕ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆರನೆ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿತ್ತು. ಹಾಗಾಗಿ ಆತನ ಗುರುತು ಪತ್ತೆಯಾಗಿರಲಿಲ್ಲ. ಈಗ ಆತನ ಗುರುತು ಪತ್ತೆಯಾಗಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೃತನನ್ನು ಭದ್ರಾವತಿಯ ಕೆ.ಹೆಚ್.ನಗರದ ಆಟೋ ಚಾಲಕ ಶಶಿ (32) ಎಂದು ತಿಳಿದು ಬಂದಿದೆ.
ಗುರುತು ಪತ್ತೆಯಾಗಿದ್ದು ಹೇಗೆ?:
ಛಿದ್ರವಾಗಿದ ದೇಹದ ಭಾಗಗಳನ್ನು ವಶಕ್ಕೆ ಪೆಡದಿದ್ದ ಪೊಲೀಸರು ಅವುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದರು. ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಲ್ಯಾಬ್’ಗೆ ಕಳುಹಿಸಲಾಗಿತ್ತು. ಸೆಪ್ಟೆಂಬರ್ 10ರಂದು ಡಿಎನ್ಎ ಪರೀಕ್ಷೆಯ ವರದಿ ಬಂದಿದೆ.
2021ರ ಜನವರಿ 21ರ ರಾತ್ರಿ 10.20ರ ಹೊತ್ತಿಗೆ ಕಲ್ಲಗಂಗೂರು ಗ್ರಾಮದ ಸರ್ವೇ ನಂಬರ್ 2ರಲ್ಲಿರುವ ಎಸ್.ಎಸ್.ಕ್ರಷರ್ ಬಳಿ ಭಾರಿ ಪ್ರಮಾಣದ ಸ್ಪೋಟಕ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಆರು ಮಂದಿ ಮೃತರಾಗಿದ್ದರು. ಸ್ಪೋಟದ ತೀವ್ರತೆ ನೂರಾರು ಕಿ.ಮೀ ವರೆಗೆ ವ್ಯಾಪಿಸಿತ್ತು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿತ್ತು.







