ತನ್ನನ್ನು ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆಗೊಳಿಸಲು ಯಾವುದೇ ನೌಕರ ಒತ್ತಾಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಸೆ.12: ತನ್ನನ್ನು ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆಗೊಳಿಸುವಂತೆ ಯಾವುದೇ ನೌಕರನು ಒತ್ತಾಯ ಮಾಡುವಂತಿಲ್ಲವೆಂದು ಸುಪ್ರೀಂಕೋರ್ಟ್ ಶನಿವಾರ ತಿಳಿಸಿದೆ. ಅಗತ್ಯಕ್ಕನುಗುಣವಾಗಿ ನೌಕರನನ್ನು ವರ್ಗಾವಣೆಗೊಳಿಸುವುದು ಉದ್ಯೋಗದಾತನಿಗೆ ಸೇರಿದ್ದಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
‘‘ತನ್ನನ್ನು ನಿರ್ದಿಷ್ಟ ಸ್ಥಳಕ್ಕೆ ವರ್ಗಾಯಿಸುವಂತೆ ಯಾವುದೇ ನೌಕರ ಒತ್ತಾಯಪಡಿಸುವಂತಿಲ್ಲ. ಅಗತ್ಯವನ್ನು ಪರಿಗಣಿಸಿ ತನ್ನ ನೌಕರನನ್ನು ವರ್ಗಾಯಿಸುವುದು ಉದ್ಯೋಗದಾತನಿಗೆ ಬಿಟ್ಟ ವಿಷಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಅನಿರುದ್ಧ ಭೋಸ್ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಅಮ್ರೋಹಾದಿಂದ ಗೌತಮ್ ಬುದ್ಧ ನಗರಕ್ಕೆ ತನ್ನನ್ನು ವರ್ಗಾವಣೆಗೊಳಿಸುವಂತೆ ಕೋರಿ ಈ ಉಪನ್ಯಾಸಕಿ ಸಂಬಂಧಿತ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಮನವಿಯನ್ನು ಪ್ರಾಧಿಕಾರವು 2017ರಲ್ಲಿ ತಿರಸ್ಕರಿಸಿತ್ತು. ಇದರ ವಿರುದ್ಧ ಉಪನ್ಯಾಸಕಿಯು ಅಲಹಾಬಾದ್ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ ಅವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಆನಂತರ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಕಳೆದ ನಾಲ್ಕು ವರ್ಷಗಳಿಂದ ದೂರುದಾರೆಯು ಅಮ್ರೋಹಾದಲ್ಲಿ ಶಿಕ್ಷಕಿಯಾಗಿದ್ದು, ಸರಕಾರದ ನೀತಿಯ ಪ್ರಕಾರ ತಾನು ವರ್ಗಾವಣೆಗೊಳ್ಳುವ ಹಕ್ಕು ಹೊಂದಿದ್ದೇನೆ ಎಂದವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.







