ಜಮ್ಮು-ಕಾಶ್ಮೀರ ಸಾಹಿತಿ ಅಝೀಝ್ ಹಾಝಿನಿ ನಿಧನ

Photo: facebook.com/jkpdp1
ಶ್ರೀನಗರ, ಸೆ.12: ಖ್ಯಾತ ಬರಹಗಾರ ಹಾಗೂ ಜಮ್ಮು-ಕಾಶ್ಮೀರ ಕಲೆ, ಸಂಸ್ಕೃತಿ ಹಾಗೂ ಭಾಷಾ ಅಕಾಡಮಿಯ ಮಾಜಿ ಕಾರ್ಯದರ್ಶಿ ಅಝೀಝ್ ಹಾಝಿನಿ ಅಲ್ಪಕಾಲದ ಅಸೌಖ್ಯದಿಂದ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬ ಮೂಲಗಳು ರವಿವಾರ ತಿಳಿಸಿವೆ.
64 ವರ್ಷದ ಅಝೀಝ್ ಹಾಝಿನಿ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆಂದು ಅವರ ಕುಟುಂಬಿಕರು ತಿಳಿಸಿದ್ದಾರೆ. ಹಾಝಿನಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ರವಿವಾರ ಬೆಳಗ್ಗೆ ನೆರವೇರಿಸಲಾಯಿತು.
ಹಲವಾರು ಸಾಹಿತ್ಯಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ಆದರಣೀಯರಾಗಿದ್ದ ಹಾಝಿನಿ ಅವರು ಮೂಲತಃ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯವರು. ಹಲವಾರು ಪುಸ್ತಕಗಳ ಲೇಖಕರೂ ಆಗಿರುವ ಹಾಝಿನಿ ಅವರು ಜಮ್ಮಕಾಶ್ಮೀರ ಕಲೆ, ಸಂಸ್ಕೃತಿ ಹಾಗೂ ಭಾಷಾ ಅಕಾಡಮಿಯ ನಿಯೋಜಿತ ಕಾರ್ಯದರ್ಶಿಯಾಗಿದ್ದರು.
ಹಾಝಿನಿ ಅವರ ನಿಧನಕ್ಕಾಗಿ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ನಾಯಕರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ‘‘ಡಾ.ಅಝೀಝ್ ಹಾಝಿನಿ ಅವರ ನಿಧನದಿಂದಾಗಿ ಜಮ್ಮುಕಾಶ್ಮೀರದ ಸಾಹಿತ್ಯಿಕ ವಲಯದಲ್ಲಿ ದೊಡ್ಡ ಶೂನ್ಯವು ಆವರಿಸಿದೆ’’ ಎಂದು ಪಿಡಿಪಿ ಪಕ್ಷವು ಟ್ವೀಟ್ ಮಾಡಿದೆ.





