ಬುಡಕಟ್ಟು ವ್ಯಕ್ತಿಯ ಕಸ್ಟಡಿ ಸಾವಿನ ಪ್ರಕರಣ: ಪೊಲೀಸ್ ಅಧೀಕ್ಷಕ ವಜಾ
ಹೊಸದಿಲ್ಲಿ, ಸೆ.12: ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ರವಿವಾರ ಖರ್ಗೊನೆ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ವಜಾಗೊಳಿಸಿರುವುದಾಗಿ ಮಧ್ಯಪ್ರದೇಶ ಸರಕಾರ ರವಿವಾರ ಘೋಷಿಸಿದೆ. ಡಕಾಯಿತಿ ಘಟನೆಗೆ ಸಂಬಂಧಿಸಿ ಖರ್ಗೊನೆ ಜಿಲ್ಲೆಯ ಬುಡಕಟ್ಟು ನಿವಾಸಿ 35 ವರ್ಷ ವಯಸ್ಸಿನ ಬಿಸಾನ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 7ರಂದು ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿ ನಾಲ್ವರು ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿತ್ತು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವಿವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ‘‘ ಬುಡಕಟ್ಟು ಸಮುದಾಯದ ಬಿಸಾನ್ನ ಕಸ್ಟಡಿ ಸಾವಿನ ಪ್ರಕರಣದ ತನಿಖೆಯಲ್ಲಿ ಮೇಲ್ವಿಚಾರಣೆಯ ಕೊರತೆಯುಂಟಾದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕ ಶೈಲೇಂದ್ರ ಸಿಂಗ್ ಅವರನ್ನು ವಜಾಗೊಳಿಸಲಾಗಿದೆ’’ ಎಂದು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಲಾಗುತ್ತಿರುವುದು ಹಾಗೂ ತನಿಖಾ ಫಲಿತಾಂಶ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು. ಇಂತಹ ಎಲ್ಲಾ ಘಟನೆಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುವುದಾಗಿ ಅವರು ತಿಳಿಸಿದರು.
ಖಾರ್ಗೊನ್ ಸಬ್ಜೈಲಿನಲ್ಲಿ ಬಿಸಾನ್ ಸಾವನ್ನಪ್ಪಿದ ಬಳಿಕ 100 ಮಂದಿ ಗ್ರಾಮಸ್ಥರ ಗುಂಪೊಂದು ಸೆಪ್ಟೆಂಬರ್ 7ರಂದು ಬಿಸ್ತಾನ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ಮೂವರು ಪೊಲೀಸರನ್ನು ಗಾಯಗೊಳಿಸಿತ್ತು.
ಖೈರಾಕುಂಡಿ ಗ್ರಾಮದಲ್ಲಿ ನಡೆದ ಡಕಾಯಿತಿ ಘಟನೆಗೆ ಸಂಬಂಧಿಸಿ ಬಿಸಾನ್ ನ್ನು ಬಂಧಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಆತ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದ . ಕಸ್ಟಡಿ ಸಾವಿನ ಘಟನೆಗೆ ಸಂಬಂಧಿಸಿ ಜಿಲ್ಲಾ ಜೈಲು ಅಧೀಕ್ಷಕ ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ರಾಜ್ಯ ಸರಕಾರವು ಅಮಾನತುಗೊಳಿಸಿತ್ತು.
ಬುಡಕಟ್ಟು ವ್ಯಕ್ತಿಯ ಸಾವಿನ ಘಟನೆಯ ಬಳಿಕ ರಾಜ್ಯ ಸರಕಾರವು ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ ಸ್ಟೇಬಲ್ ಹಾಗೂ ಇಬ್ಬರು ಕಾನ್ ಸ್ಟೇಬಲ್ ಗಳನ್ನು ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿತ್ತು ಹಾಗೂ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿತ್ತು ಹಾಗೂ ಮೃತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರವನ್ನು ಕೇಳಿತ್ತು.







