ಭದ್ರಾವತಿಯಲ್ಲಿ ಬೀದಿ ನಾಯಿ ಕೊಲೆ ಪ್ರಕರಣ: 12 ಜನರ ಬಂಧನ

ಶಿವಮೊಗ್ಗ(ಸೆ.12): ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮದ ಎಂಪಿಎ ಅರಣ್ಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಸಾಯಿಸಿ ಸಮಾಧಿ ಮಾಡಿರುವ ಪ್ರಕರಣ ಸಂಬಂಧ 12 ಆರೋಪಿಗಳನ್ನು ಬಂಧಿಸಿದ್ದಾರೆ.
ನಾಯಿಗಳನ್ನು ಹಿಡಿದು ಮಾರಕ ಚುಚ್ಚುಮದ್ದು ನೀಡಿದ ವ್ಯಕ್ತಿಗಳು, ಇಬ್ಬರು ಪಂಚಾಯಿತಿ ಸದಸ್ಯರು, ಜೆಸಿಬಿ ಆಪರೇಟರ್, ಪಂಚಾಯಿತಿ ಕಾರ್ಯದರ್ಶಿ ಮತ್ತು ಪಂಚಾಯಿತಿ ಬಿಲ್ ಕಲೆಕ್ಟರ್ ಸೇರಿ ಒಟ್ಟು 12 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಬದಾಳ್ ಹೊಸೂರು ಗ್ರಾಮದ ಗುಂಡಿಯಲ್ಲಿ ಒಟ್ಟು 60 ನಾಯಿಗಳ ಮೃತ ದೇಹಗಳು ಪತ್ತೆಯಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಗ್ರಾಮದಲ್ಲಿ ಕೆಲವು ನಾಯಿಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೈಸೂರಿನಿಂದ ನಾಯಿ ಹಿಡಿಯುವವರನ್ನು ಕರೆಸಿದ್ದು, ಅವರು ನಾಯಿಗಳನ್ನು ಹಿಡಿದು ಮಾರಕ ಚುಚ್ಚು ಮದ್ದನ್ನು ನೀಡಿ ಸಾಯಿಸಿ ಸ್ಥಳೀಯ ಜೆಸಿಬಿಯನ್ನು ಬಳಸಿ ಗುಂಡಿಯನ್ನು ತೋಡಿ ಕೊಲ್ಲಲ್ಪಟ್ಟ ನಾಯಿಗಳನ್ನು ಹೂತಿರುವುದು ಕಂಡುಬಂದಿದೆ.
ಪಶುವೈದ್ಯರಿಂದ ಸದರಿ ನಾಯಿಗಳ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ, ಪಶುವೈದ್ಯರಿಂದ ಸಂಗ್ರಹಿಸಿದ ಮೃತ ನಾಯಿಗಳ ಮೂಳೆ, ಚರ್ಮ, ಕೂದಲು ಮತ್ತು ಪಿತ್ತಜನಕಾಂಗದ ಭಾಗವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.







