ಮುಂಬೈ: ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಮಹಿಳೆಯ ಕುಟುಂಬವನ್ನು ಭೇಟಿಯಾದ ಎನ್‌ಸಿಡಬ್ಲ್ಯು ತಂಡ

ಮುಂಬೈ,ಸೆ.12: ಕ್ರೂರ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಯಿಂದಾಗಿ ಮೃತಪಟ್ಟ ಮಹಿಳೆಯ ಕುಟುಂಬ ಸದಸ್ಯರನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು)ದ ತಂಡವು ರವಿವಾರ ಭೇಟಿ ಮಾಡಿದೆ. ಅಪರಾಧ ನಡೆದಿದ್ದ ಸ್ಥಳ ಮತ್ತು ಮಹಿಳೆಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗೂ ತಂಡವು ಭೇಟಿ ನೀಡಿ ಪರಿಶೀಲಿಸಿದೆ.
ಶುಕ್ರವಾರ ಬೆಳಗಿನ ಜಾವ ಉಪನಗರ ಸಾಕಿನಾಕಾದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟೆಂಪೋವೊಂದರಲ್ಲಿ ಸ್ಥಳೀಯ ನಿವಾಸಿ,34ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಕಬ್ಬಿಣದ ಸರಳು ತೂರಿಸಿ ಅಮಾನುಷವಾಗಿ ಹಿಂಸಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆಕೆ ರಾಜಾವಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಳು. ಈ ಘಟನೆ 2012ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ನೆನಪಿಸಿತ್ತು.
ಪ್ರದೇಶದಲ್ಲಿಯ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿದ ಪೊಲೀಸರು ಲಭ್ಯ ಸುಳಿವುಗಳನ್ನು ಆಧರಿಸಿ ಮೋಹನ ಚೌಹಾಣ (45) ಎಂಬಾತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು,ಆತನ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದೆ.
ಎನ್ ಸಿಡಬ್ಲ್ಯು ತಂಡದ ಸದಸ್ಯರು ಸಾಕಿನಾಕಾ ಪೊಲೀಸ್ ಠಾಣೆಗೂ ಭೇಟಿ ನೀಡಿ ಪ್ರಕರಣದ ವಿವರಗಳನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡವು ಡಿಜಿಪಿ ಕಚೇರಿಗೂ ಭೇಟಿ ನೀಡಿತ್ತು.







