ಸಾಮಾಜಿಕ ಜಾಲತಾಣಗಳಿಂದ ವಿಷವುಣಿಸಲಾಗುತ್ತಿದೆ: ಎಡಿಜಿಪಿ ಭಾಸ್ಕರ್ ರಾವ್ ಕಳವಳ

ಬೆಂಗಳೂರು, ಸೆ. 12: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ವಿಷವುಣಿಸಲಾಗುತ್ತಿದೆ ಎಂದು ರೈಲ್ವೇ ಪೊಲೀಸ್ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಆತಂಕ ವ್ಯಕ್ತಪಡಿಸಿದರು.
ರವಿವಾರ ನಗರದ ಜಾನ್ಸನ್ ಮಾರ್ಕೆಟ್‍ನ ಸೆ.ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 29ನೆ ವಾರ್ಷಿಕ `ಹುಸೇನ್ ದಿನ' ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ ಮನಸ್ಸುಗಳನ್ನು ಕೆಡಿಸುವ ಕೆಲಸ ನಡೆಯುತ್ತಿದೆ.ಆದರೆ, ಇದನ್ನು ನಾವು ಮೆಟ್ಟಿ ನಿಲ್ಲಬೇಕು.ಜತೆಗೆ, ಇದರಿಂದ ದೂರು ಉಳಿಯಬೇಕಾಗಿದೆ ಎಂದು ಅವರು ನುಡಿದರು.
ಇಮಾಮ್ ಹುಸೇನ್(ರ) ಅವರ ಕುರಿತು ಮಾತನಾಡುವಷ್ಟು ಅರ್ಹತೆ ನನ್ನಲ್ಲಿ ಇಲ್ಲ.ಆದರೆ, ಅವರ ಬಗ್ಗೆ ಕೇಳುವ ಅರ್ಹತೆ ನನ್ನಲ್ಲಿ ಇದೆ ಎಂದ ಅವರು, ಇಮಾಮ್ ಹುಸೇನ್(ರ) ನಮ್ಮ ಎಲ್ಲರ ಮನಸ್ಸಿನಲ್ಲಿ ಇದ್ದಾರೆ.ಅವರ ಧೈರ್ಯ ಮತ್ತು ಜೀವನ ನಮಗೆ ಸ್ಫೂರ್ತಿ ಆಗಬೇಕು.ಅವರ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಹಾಗೂ ಸಹಾಯ ಮಾಡುವತ್ತ ಸಾಗಬೇಕಾಗಿದ ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಪರಿಣಾಮದಿಂದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತಷ್ಟು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ದುರ್ಘಟನೆಗಳು ಮತ್ತೆ ನಮ್ಮ ಜೀವನದಲ್ಲಿ ಬರಬಾರದು ಎಂದು ಭಾಸ್ಕರ್ ರಾವ್ ಹೇಳಿದರು.







