ನಿರ್ಮಾಣ ಹಂತದ ಟ್ಯಾಂಕಿನಿಂದ ಬಿದ್ದು ಯುವಕ ಮೃತ್ಯು
ಹಿರಿಯಡ್ಕ, ಸೆ.12: ನೀರಿನ ಓವರ್ ಟ್ಯಾಂಕಿನ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರೊಬ್ಬರು ಆಯಾ ತಪ್ಪಿ ಬಿದ್ದು ಮೃತಪಟ್ಟ ಘಟನೆ ಸೆ.11ರಂದು ಬೆಳಗ್ಗೆ ಹಿರಿಯಡಕ ಕೊಟ್ನಕಟ್ಟೆಯ ಮೆಸ್ಕಾಂ ಕಚೇರಿಯ ಬಳಿ ನಡೆದಿದೆ.
ಮೃತರನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾ ನಿವಾಸಿ ಕಾರ್ಮಿಕ ಸಮೀರ ಬರ್ಮನ್ (29) ಎಂದು ಗುರುತಿಸಲಾಗಿದೆ.
ಇವರು ಇತರರೊಂದಿಗೆ ಸೇರಿ ಕಳೆದ ಒಂದು ತಿಂಗಳಿನಿಂದ ಟ್ಯಾಂಕ್ ಕೆಲಸ ಮಾಡುತ್ತಿದ್ದರು. ಓವರ್ ಟ್ಯಾಂಕಿನ ಕೆಳಭಾಗದಲ್ಲಿ ಮರದ ಹಲಗೆಯನ್ನು ಕಟ್ಟಿ ಸುಮಾರು 30-35 ಅಡಿ ಎತ್ತರದಲ್ಲಿ ಕೆಲಸ ಮಾಡುತ್ತಿದ್ದ ಸಮೀರ, ಏಣಿಯಿಂದ ಇಳಿಯಲು ಅಣಿಯಾಗುತ್ತಿರುವಾಗ ಆಯಾ ತಪ್ಪಿ ಬಿದ್ದರೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟರು. ಈ ಕಾಮಗಾರಿಯ ಗುತ್ತಿಗೆಯನ್ನು ಗುತ್ತಿಗೆದಾರ ಸುರೇಶ್ ಶೆಟ್ಟಿ ಕರ್ಜೆ ವಹಿಸಿದ್ದು, ಅವರಿಂದ ಉಪ ಗುತ್ತಿಗೆ ಯನ್ನು ಶ್ರೀಧರ ಆಚಾರ್ಯ ನಡೆಸುತ್ತಿದ್ದರು. ಈ ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮ ಅಳವಡಿಸದೆ ನಿರ್ಲಕ್ಷಿಸಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





