9/11 ವರ್ಷಾಚರಣೆ ಸಂದರ್ಭ ವೀಡಿಯೊದಲ್ಲಿ ಕಾಣಿಸಿಕೊಂಡ ಅಲ್ ಖೈದಾ ಮುಖಂಡ ಅಲ್ ಝವಾಹರಿ
ಹೊಸದಿಲ್ಲಿ, ಸೆ.12: ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಭಯೋತ್ಪಾದಕ ದಾಳಿಯ 20ನೇ ವರ್ಷದ ಸಂದರ್ಭದಲ್ಲೇ ವೈರಲ್ ಆಗಿರುವ ವೀಡಿಯೋದಲ್ಲಿ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಯ್ಮಾನ್ ಅಲ್ ಝವಾಹಿರಿ ಹಲವು ವಿಷಯಗಳ ಬಗ್ಗೆ ಮಾತನಾಡಿರುವ ದೃಶ್ಯಗಳಿವೆ. ಝವಾಹರಿ 2020ರ ನವೆಂಬರ್ನಲ್ಲಿ ಮೃತಪಟ್ಟಿದ್ದನೆಂದು ವದಂತಿ ಹಬ್ಬಿತ್ತು.
‘ಝವಾಹರಿ ಮೃತನಾಗಿದ್ದಾನೆಂಬ ವದಂತಿಯ ಮಧ್ಯೆಯೇ ಆತ 60 ನಿಮಿಷಗಳ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು, ಡಿಸೆಂಬರ್ ನಂತರದ ಹಲವು ಘಟನೆಗಳನ್ನು ಉಲ್ಲೇಖಿಸುವ ಮೂಲಕ ತಾನಿನ್ನೂ ಬದುಕಿರುವುದಕ್ಕೆ ಕೆಲವು ಪುರಾವೆ ಒದಗಿಸಿದ್ದಾನೆ’ ಎಂದು ಜಿಹಾದಿ ಗುಂಪುಗಳ ಆನ್ ಲೈನ್ ಚಟುವಟಿಕೆಯ ಮೇಲೆ ನಿಗಾ ಇರಿಸಿರುವ ಅಮೆರಿಕ ಮೂಲದ ಎಸ್ ಐಟಿಇ ಗುಪ್ತಚರ ತಂಡದ ನಿರ್ದೇಶಕಿ ರೀಟಾ ಕಾಟ್ಝ್ ಟ್ವೀಟ್ ಮಾಡಿದ್ದಾರೆ.
ಜನವರಿ 1ರಂದು ಸಿರಿಯಾದಲ್ಲಿರುವ ರಶ್ಯಾ ಸೇನಾ ನೆಲೆಯ ಮೇಲೆ ಅಲ್ ಖೈದಾ ಸಹಸಂಘಟನೆ ಹುರಾಸ್ ಅಲ್ದೀನ್ ನಡೆಸಿದ ಬಾಂಬ್ ದಾಳಿಯ ಬಗ್ಗೆ ಝವಾಹರಿ ಪ್ರಸ್ತಾವಿಸಿದ್ದಾನೆ. ‘ಅಲ್ಲಾಹ್ ಅವರನ್ನು(ಝವಾಹರಿ) ರಕ್ಷಿಸಲಿ’ ಎಂಬ ಒಕ್ಕಣೆಯೊಂದಿಗೆ ಆರಂಭವಾಗುವ ವೀಡಿಯೊ ದೃಶ್ಯದಲ್ಲಿ ತಾಲಿಬಾನ್ ಮಾಧ್ಯಮಗಳಲ್ಲಿ ಪ್ರಸಾರವಾದ ತುಣುಕುಗಳನ್ನು ಬಳಸಲಾಗಿದೆ.
‘ಜಾಗತಿಕ ಜಿಹಾದಿ ಅಭಿಯಾನದಲ್ಲಿ ತಾಲಿಬಾನ್ ಗಳ ಮಹತ್ವವನ್ನು ಸಂಕೇತಿಸುವ, ಅಫ್ಘಾನ್ ನಲ್ಲಿ ತಾಲಿಬಾನ್ ಗೆಲುವು ಅಲ್ ಖೈದಾದ ಗೆಲುವೂ ಆಗಿದೆ ಎಂಬುದನ್ನು ಮತ್ತೊಮ್ಮೆ ಸೂಚಿಸುವ ಪ್ರಯತ್ನ ಇದಾಗಿದೆ. ಅಲ್ ಖೈದಾ ಪರವಾಗಿರುವ ಮಾಧ್ಯಮಗಳಲ್ಲಿ 9/11ರ ಸಂಭ್ರಮಾಚರಣೆ ಮತ್ತು ಹುರಿದುಂಬಿಸುವ ಪೋಸ್ಟರ್ಗಳು, ವೀಡಿಯೊಗಳು ಹ್ಯಾಶ್ ಟ್ಯಾಗ್ ಮುಂತಾದ ವುಗಳ ಮಹಾಪೂರವೇ ತುಂಬಿದೆ. ಇದೊಂದು ವ್ಯವಸ್ಥಿತವಾಗಿ ಸಂಯೋಜಿಸಿದ ಅಭಿಯಾನವಾಗಿದೆ’ ಎಂದು ರೀಟಾ ಕಾಟ್ಝ್ ಹೇಳಿದ್ದಾರೆ.







